ನೀನಿಲ್ಲದೇ
ಬೆಳಗಿನ ಜಾವ ಸುಮಾರು ಮೂರು ಆಗಿತ್ತೆಂದು ಕಾಣುತ್ತದೆ ಹೊರಗೆ ಮಳೆಯು ಸುರಿಯುವ ರಫ ರಫ ಜೋರಾಗಿ ಕೇಳಿಸತೊಡಗಿತ್ತು. ಒಂದು ಸಲ ವಾಶರೂಮ್ ಹೋಗಿ ಬರೋಣ ಅಂತ ಮೇಲೆದ್ದು ಕುಳಿತೆ. ಹೊರಗೆ ಧೋ ಎಂದು ಸುರಿಯುವ ಮಳೆ , ಮತ್ತು ಸೂಂಯ್ಯ ಎಂದು ಸೂಸುವ ಗಾಳಿಗೆ ಇನ್ನೂ ಮತ್ತೆ ಮರಳಿ ನಿದ್ದೆ ಬರುವುದಿಲ್ಲ ಅನಿಸಿತು. ಇನ್ನೇನು ಎಷ್ಟು ಮಾಡಿದರೂ ನಿದ್ದೆ ಬಾರದೆಂದು ತಿಳಿದ ಮೇಲೆ ಮಾಡುವುದೇನು ? ಅದಕ್ಕೆ ಟಾಟಾ ಎಂದು ಹೇಳಿ ಒಂಚೂರು ಚಹಾ ಕುಡಿದರಾಯಿತು ಎಂದು ಅಡುಗಮನೆಗೆ ಹೋದೆ ಹಾಲು ಸಕ್ಕರೆ ಹಾಕಿ ಒಲೆಯ ಮೇಲಿಟ್ಟು ಮೊಬೈಲ್ ಲ್ಲಿ ಭಾವಗೀತೆ ಹಾಕಿದೆ.
" ಬಾ ಒಮ್ಮೆ ಬಂದು ಬಿಡು ಕಣ್ಣಲಿ ಕಣ್ಣನಿಡು ,
ಮಾದು ಹೋಗಲಿ ಎದೆಯ ಸ್ನಿಗ್ಧ ಗಾಯ
ಉರಿವ ವಿರಹಕೆ ಮಧುರ ಅಧರವರಳಿಸಿ
ಮಧುವ ಸುಧೆ ಮುಲಾಮನು ನೀಡು ಚೆಲ್ಲಿ ನಗೆಯಾ "
ಮನ ಹಾಡಿಗೆ ಗುನುಗುನಿಸಲು ಶುರುಮಾಡಿತು..
ಮರೆತು ಬಿಡಬೇಕು ಎಂದರು ಬಿಡದೆ ಕಾಡುವ ಅವನು ನೆನಪುಗಳು..! ಎದೆಯೊಳಗೆ ಸಣ್ಣಗೆ ನೋವು ಶುರುವಾಯಿತು. ಒಂಚೂರು ಕಣ್ಣಲ್ಲಿ ನೀರು ಇಣುಕಿ ಹಾಕಿ ಮತ್ತೆ ಕಣ್ಣಂಚಲಿ ನಿಂತು ಬಿಟ್ಟಿತು. ರೆಪ್ಪೆಗಳು ಒಪ್ಪಿಗೆ ಕೊಡುವ ತನಕವೂ ಅದು ಅಲ್ಲಿಂದ ಕದಲುವುದಿಲ್ಲ ವೆಂದು ನನಗೂ ಗೊತ್ತಿದೆ ಆದರೆ ನೋವು ಎದೆಯೊಳಗೆ ಈಟಿ ಮೀಟಿದಂತೆ ಆಗ್ತಿತ್ತು. ಇಬ್ಬರು ಮಾತಾಡುತ್ತಲೇ ಕುಳಿತು ತಮಾಷೆ ಮಾಡುವಾಗ ಸುಮ್ಮನೇ ಸಣ್ಣ ಒಂದು ಮಾತಿನಿಂದ ಅವನು ನನ್ನೊಂದಿಗೆ ಮುನಿಸಿಕೊಂಡಿದ್ದ..! ಸುಮ್ಮನೇ ಹೀಗೆ , ನಾನು ಆ ಕ್ಷಣವೇ ಅವನಲ್ಲಿ ಕ್ಷಮೆ ಕೇಳಿದ್ದೆ ಆದರೆ ಅವನು ಇನ್ನೂ ಸಿಡಿ ಮಿಡಿ ಯಾಗಿದ್ದ. ನನಗೆ ಏನನ್ನೋ ಕಳೆದುಕೊಂಡ ಭಾಸವಾಗುತ್ತಿತ್ತು. ಬೇಗನೆ ಎದ್ದಿದ್ದರಿಂದ ಏನೋ ಸ್ವಲ್ಪ ಹೊಟ್ಟೆಯಲ್ಲಿ ಚುರುಚುರು ಅನಿಸತೊಡಗಿತು. ಇಷ್ಟೊತ್ತಿನಲ್ಲಿ ಏನು ತಿನ್ನುವುದು ? ಎಂದು ಸುಮ್ಮನಾದೆ.
ಚಹಾದ ಘಮ ಘಮ ವಾಸನೆ ಬಂದಿತು ಎದ್ದು ಹೋಗಿ ಕಪ್ ಗೆ ಸುರಿದುಕೊಂಡು ಬಂದು ಪುಸ್ತಕ ಕೈಯಲ್ಲಿ ಹಿಡಿದು ಕುಳಿತುಕೊಂಡೆ.
ಏನಾದರೂ ಓದುವ ಅನಿಸಿತು ಆದರೆ ಮತ್ತೆ ಅವನದೇ
ನೆನಪು...! ಓದಲು ಮನಸ್ಸು ಬರುತ್ತಿಲ್ಲ. ಚಹಾ ಹೀರುತ್ತಲೇ ನಾನೇ ಹಿಂದೆ ಬರೆದ ಸಾಲುಗಳು ನೆನಪಿಗೆ
ಬಂದವು..
" ಚಹಾ ಕುಡಿಯುವುದು
ಬರೀ ನೆಪ ಮಾತ್ರ ಗೆಳೆಯಾ
ನನ್ನ ನಿನ್ನ ಮೊದಲ ಮಧುರ
ಭೇಟಿಗೆ ಇದುವೆ ಕಾರಣ...
ಚಹಾ ಕುಡಿಯುವುದು
ಬರೀ ನೆಪ ಮಾತ್ರ ಗೆಳೆಯಾ
ವಾಸ್ತವ ನನ್ನ ಹೃದಯ
ನಿನ್ನ ಎದುರಿಗೆ ಬಿಚ್ಚಿಡಲು
ಇದುವೇ ಮಾಧ್ಯಮ "
ಹೊರಗೆ ಮಳೆ ಧೋ ದೋ ಎಂದು ಬಿಟ್ಟು ಬಿಡದೆ ಸುರಿಯುತ್ತಲೇ ಇತ್ತು. ಮತ್ತೆ ನಾಯಿಗಳ ಬೊಗಳಿಕೆ ಬೇರೆ ಜೋರಾಗಿ ಕೇಳಿ ಬರುತ್ತಿತ್ತು. ಈಗ ಸಣ್ಣಗೆ ದ್ವಿಚಕ್ರ ವಾಹನಗಳ ಓಡಾಟದ ಶಬ್ದ ಒಹೋ ಜನರೆಲ್ಲ ಏಳಲು ಶುರುಮಾಡಿದ್ದಾರೆ ಅನಿಸಿತು ಬಹುಶಃ ಇವರಿಗೆ ಬೆಳಗಿನ ಜಾವದ ಕೆಲಸಗಳಿರಬಹುದು ಅಂತ.ಅದೇ ಫಸ್ಟ್ ಶಿಫ್ಟ್ ಕೆಲಸಕ್ಕೆ ಹೋಗುವವರು ಬೈಕ್ ಸ್ಟಾರ್ಟ್ ಮಾಡಿದ ಶಬ್ದವೂ ಕೇಳಿಸ ತೊಡಗಿತು.ಪಕ್ಕದ ಮನೆಯ ಹಿತ್ತಿಲ ಬಾಗಿಲಿನ ಚಿಲಕದ ಶಬ್ದ ಮಾಡಿತು ಸುವರ್ಣಕ್ಕ ಎದ್ದೆಳೆಂದು ಆಯಿತು ಇನ್ನೇನು ಬೆಳಗಿನ ಕೆಲಸಕ್ಕೆ ತೊಡಗುತ್ತಾಳೆ. ನಮ್ಮ ಮನೆಯ ಮೇಲಿನ ಮನೆಯಲ್ಲಿ ಮಗು ಜೋರಾಗಿ ಅಳಲು ತೊಡಗಿತು ಆ ಮಗುವಿನ ತಾಯಿ ಮಗುವನ್ನು ರಮಿಸುತ್ತ " ಕಾಯ್ ರೇ ಬಾಳಾ ಕಯ್ ಜಾಲಾ , ಗಫ್ ! ಜೋಪರೇ " ( ಏನಾಯಿತು ಮಗುವೆ ಏನಾಯಿತು ಸುಮ್ಮನೇ ಮಲಗು ನಾನು ಇಲ್ಲೇ ಇರುವೆ ) ಅನ್ನುವುದ ಇಲ್ಲಿಗೆ ಕೇಳಿಸಿತು. ಮೊನ್ನೆ ಮಾತಾಡಿಸಿದಾಗ ಅವಳು" ಹೋ ತುಮಿ ಪನ್ ಬೆಳಗಾವಚೇ ಕಾಯ್ ವೋ " ( ಹೋ ನೀವು ಬೆಳಗಾವಿಯವರೇ ನಾ ) ಅಂತ ಮಾತಾಡಿಸಿ ಅವರು ಹೊಸದಾಗಿ ಬಾಡಿಗೆಗೆ ಬಂದ ವಿಚಾರ ತಿಳಿಸಿದ್ದಳು. ಇವೆಲ್ಲವೂ ದಿನ ನಿತ್ಯದ ಸಾಮಾನ್ಯ ವಿಷಯಗಳೇ ಆದರೆ ಇವತ್ತು ಎಲ್ಲವೂ ನನಗೆ ತುಂಬಾ ಡಿಸ್ಟರ್ಬ ಮಾಡತಾ ಇದ್ದವು. ಕಣ್ಣಿಗೆ ನಿದ್ದೆ ಸುಳಿಯುತ್ತಿಲ್ಲ
ಅವನು ನೆನಪಿಗೆ ಬಂದು ಸುಮ್ಮನೇ ಕಾಡಿಸುತ್ತಿದ್ದಾನೆ.
ಈಗ ಅವನನ್ನು ನಾನು ನಿದ್ದೆಗೆಡಸಿದ್ದಕ್ಕಾಗಿ ಶಪಿಸಬೇಕೋ ಅಥವಾ ಮುದ್ದಿಸಬೇಕೋ ಒಂದು ತಿಳಿತಿಲ್ಲ.
ನಾನು ಮತ್ತೆ ಮೌನವಾಗಿ ಗೋಡೆಗೆ ಒರಗಿ ಕುಳಿತೆ. ಏನು ಓದಲಿ ಅಲ್ಲಿ ಪುಟಗಳಲ್ಲಿ ಅವನೇ ಕಾಣ್ತಿದ್ದ , ಮತ್ತೆ ಕಣ್ಣುಗಳು ತೇವವಾದವು. ಮನಸ್ಸೆಲ್ಲ ಅವನ ನನ್ನ ಮೊದಲ ಭೇಟಿಯ ಪ್ಲ್ಯಾಶ ಬ್ಯಾಕ್ ಆ ಕ್ಷಣಗಳತ್ತ ಹಿಂದೆ ತಿರುಗಿ ಹೋಗಿತ್ತು...!!!
ಅವನ ನನ್ನ ಭೇಟಿಯೇ ಆಕಸ್ಮಿಕ ನಾನು ಆಗತಾನೆ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದೆ ಮತ್ತು ನಾನು ಆ ನಾಲ್ಕು ರಸ್ತೆಗಳು ಕೂಡುವ ಅ ಒಂದು ತಿರುವಿನಲ್ಲಿರುವ ಗಣೇಶನ ಗುಡಿ ಮುಂದೆ ಹಾಯ್ದು ಕೆಲಸಕ್ಕೆ ಹೋಗುತ್ತಿದ್ದೆ. ಹೋಗುವಾಗ ಗಣೇಶನಿಗೆ ತಲೆಬಾಗಿ ನಮಸ್ಕರಿಸಿ ಹೋಗುವುದು ನನ್ನ ನಂಬಿಕೆ ಗಣಪತಿಯ ಮೇಲೆ...! ಯಾಕೋ ಲೈಪ್ ಸ್ವಲ್ಪ ಬ್ಯಾಲೆನ್ಸ್ ತಪ್ಪಿದೆ ಮತ್ತು ಹಳಿಯ ಮೇಲೆ ಚಲಿಸುತ್ತಿಲ್ಲ ಅನ್ನುವುದು ಅನುಭವಕ್ಕೆ ಬಂದಿತ್ತು. ಈಗ ನನ್ನ ನಂಬಿಕೆ ದೇವರ ಮೇಲೆ ಮಾತ್ರವೇ ಇತ್ತು. ಭಕ್ತಿಯಿಂದ ಕಣ್ಮುಚ್ಚಿ " ಎಲ್ಲಾ ಸರಿ ಮಾಡಿ ಬಿಡಪ್ಪ " ಎಂದು ಕೈ ಮುಗಿದು ಮುಂದೆ ಹೋಗುತ್ತಿದ್ದೆ.
ಒಂದಿನ ಹೀಗೆಯೇ ಕಣ್ಮುಚ್ಚಿ ದೇವರಿಗೆ ನಮಸ್ಕರಿಸಿ ಗುಡಿಯ ದ್ವಾರ ಬಾಗಲಿನಿಂದ ಹೊರಗೆ ನಾನು ಕಾಲಿಡುವಷ್ಟರಲ್ಲಿ ಅವನು ಎದುರಿಗೆ ಒಮ್ಮೆಲೆ ನನಗೆ ಡಿಕ್ಕಿ ಹೊಡೆದು ಬಿಟ್ಟಿದ್ದ ...!!! ಎಲ್ಲವೂ ಒಂದೇ ಗಳಿಗೆಗೆ ನಡೆದಿದ್ದರಿಂದ ನನ್ನ ಕೈಯಲ್ಲಿ ಇದ್ದ ಛತ್ರಿ , ಹೂವಿನ ಬುಟ್ಟಿ ಎಲ್ಲವೂ ಕೆಳಗೆ ಜಾರಿ ಬಿದ್ದು ಬಿಟ್ಟಿದ್ದವು....! ಏನಾಯಿತು ಎಂದು ಅವುಗಳನ್ನು ನಾನು ಇನ್ನೇನು ಎತ್ತಿಕೊಂಡು ಹೊರಗೆ ಹೋಗಬೇಕು ಅಷ್ಟರಲ್ಲಿ ಅವನೇ ನನ್ನ ಛತ್ರಿ ಎತ್ತಿಕೊಂಡು ಕೈ ಮುಂದೆ ಮಾಡಿ " ಸಾರಿ ನಾನು ನೋಡಲಿಲ್ಲ " ನಾನು ಛತ್ರಿ ಅವನ ಕೈಯಿಂದ ತೆಗೆದುಕೊಂಡು " ಇರಲಿ ಬಿಡಿ " ಅಂತ ಹೇಳಿ ಹೊರಗೆ ಕಾಲಿಟ್ಟೆ. ಹೊರಗೆ ಬಂದು ನನ್ನ ಚಪ್ಪಲಿ ಗಳನ್ನು ಹಾಕಿ ಕೊಳ್ಳುತ್ತಲೇ ಹಿಂದಿರುಗಿ ನೋಡಿದೆ ಅವನ ಕಣ್ಣುಗಳು ನನ್ನನ್ನೇ ದಿಟ್ಟಿಸಿದವು. ಮತ್ತೆ ನನ್ನ ಕಂಗಳು ನೆಲ ನೋಡಿದವು ದಾರಿಯಲ್ಲಿ ಹೆಜ್ಜೆ ಹಾಕುತ್ತಾ ನನ್ನ ಕಣ್ಣೊಳಗೆ ಅವನ ಕಣ್ಣುಗಳು ಏನನ್ನೋ ಪಿಸುಗುಟ್ಟಿದಂತೆ ಭಾಸವಾಯಿತು. ಹೃದಯ
" ಅಜನಬಿ ಕೌನ ಹೋ ತುಮ್ ? ಜಬಸೆ ತುಮ್ಹೆ ದೇಖಾ ಹೈ ...
ಸಾರಿ ದುನಿಯಾ ಮೆರಿ ಆಂಖೋ ಮೇ ಸಿಮಿಟ್ ಆಯಿ ಹೈ "
ಗುನುಗುನಿಸಲು ಶುರುಮಾಡಿತು...
ಹೀಗೆ ಮತ್ತೆರಡು ದಿನ ಕಳೆದ ಮೇಲೆ ಅವನನ್ನು ಅಲ್ಲಿಯೇ ನೋಡಿದೆ. ಮುಖ ಪರಿಚಯ ಆಗಿತ್ತಲ್ಲ ಮುಗುಳ್ನಗೆಯಲಿ ನಾನೇ ಅವನನ್ನು ಮಾತಾಡಿಸಿದೆ " ದಿನ ಬರ್ತಿರಲ್ಲ ? ಟೆಂಪಲ್ ಗೆ " ಅಂದೆ. ಅವನು " ಹ್ಮ ದಿನ ಬರ್ತಿನಿ. ಇಲ್ಲಿಯೇ ಕೆಳಗಡೆ ನನ್ನ ಪಿಜಿ ಇದೆ ಇಲ್ಲಿಂದ ಮುಂದೆ ಬಲಗಡೆಯ ರಸ್ತೆಯಲ್ಲಿ ನನ್ನ ಜಿಮ್ ಇದೆ " ಎಂದ. ಅದಕ್ಕೆ " ಜಿಮ್ ನಿಮ್ಮದೇ ನಾ " ಎಂದೆ. " ಇಲ್ಲ , ನನ್ನ ಫ್ರೇಂಡ್ ದು. ನಾನು ಅಲ್ಲಿ ಟ್ರೇನರ್ ಆಗಿ ಹೋಗ್ತಿನಿ. " ತನ್ನ ಓದು ಇನ್ನೂ ಇದೆ. ಓದತಾ ಪಾರ್ಟ ಟೈಮ್ ಜಾಬ್ ಮಾಡ್ತಿದ್ದಿನಿ ಅಂತ ಹೇಳಿದ. ಅವನು ನೋಡಲು ತುಂಬಾ ಸ್ಪುರದ್ರೂಪಿ, ಎಲ್ಲರಲಿ ಎದ್ದು ಕಾಣುವ ಚೆಲುವ , ರೂಪ ವಳ್ಳುವನು , ಮೊದಲ ನೋಟದಲ್ಲಿ ತನ್ನೆಡೆಗೆ ಸೆಳೆಯುವ ಆಕರ್ಷಕ ವ್ಯಕ್ತಿತ್ವ ಅವನದು.
ಹೀಗೆ ಇಬ್ಬರ ಸ್ನೇಹ ಸಂಬಂಧ ಕೆಲವೇ ದಿನಗಳಲ್ಲಿ ಬೆಸೆಯಿತು. ಇಬ್ಬರೂ ಒಂದು ಗಳಿಗೆ ಅಲ್ಲಿಯೇ ನಿಂತು ಮಾತನಾಡಿ ಪರಸ್ಪರ ಖುಷಿಯಿಂದ ಕೆಲಸಕ್ಕೆ ಹೋಗಿ ಬರತೊಡಗಿದೆವು. ಈಗ ಪೋನ ನಂಬರುಗಳ ಬದಲಾವಣೆ ಆಗಿತ್ತು ಹಾಯ್ , ಹೆಲೋ ಜೊತೆಗೆ ಕಾಫಿ ತಿಂಡಿ , ಆಸಕ್ತಿಗಳ ಬಗ್ಗೆಯೂ ತಿಳಿದುಕೊಂಡಾಗಿತ್ತು. ನನ್ನ ಬರಹದ ಆಸಕ್ತಿ ಎಲ್ಲವೂ ಹೇಳಿ ಆಗಿತ್ತು ಕವನಗಳ ಸಾಲುಗಳನ್ನು ಅವನಿಗೆ ಮೆಸ್ಸೇಜು ಮಾಡಿ ಅಭಿಪ್ರಾಯ ಕೇಳುವುದು ಅವನು ಚೆನ್ನಾಗಿ ಇದೆ ಅಂದಾಗ ಆಗುವ ಖುಷಿ ಅಷ್ಟಿಷ್ಟು ಅಲ್ಲ..! ವಿವರಿಸಲು ಅಸಾಧ್ಯ. ಹೃದಯದ ಬಡಿತ ಹೆಚ್ಚಾಗುತ್ತಲೇ ಸಾಗಿತ್ತು. ಅವನನ್ನು ಕಾಣುವುದು ಎಂದರೆ ಮನಸಿಗೆ ವ್ಯಕ್ತಪಡಿಸಲಾರದ ಸಂತೋಷ. ಅವನ ಕಣ್ಣೊಳಗೆ ನನ್ನ ಕನಸುಗಳು ನಿಧಾನವಾಗಿ ಪಿಸುಗುಟ್ಟಲು ಶುರುಮಾಡಿದವು. ನಾನೆಂದು ಅವನ್ಮುಂದೆ ಈ ಹೃದಯದಲ್ಲಿ ಎದ್ದ ತರಂಗಗಳ ಬಗ್ಗೆ ಹೇಳಲು ಹೋಗಲಿಲ್ಲ ಕೇವಲ ಅವನನ್ನು ನೋಡಿ ಅವನೊಂದಿಗೆ ಕಳೆಯುವ ಖುಷಿ ಗಳಿಗೆ ಗಳಿಗಾಗಿ ಕಾಯಲು , ಚಡಿಪಡಿಸಲು ಶುರುಮಾಡಿದೆ. ಒಂದೇ ವಾರದ ಹಿಂದೆ ಭೇಟಿ ಯಾದವನೊಬ್ಬ ಹೀಗೆ ಮನಸ್ಸಿನ ಆಳದಲ್ಲಿ ನೆಲೆನಿಂತು ಬಿಡುತ್ತಾನೆ ಅಂತ ಅನ್ನಿಸಿರಲಿಲ್ಲ...!!!
ಅವತ್ತೊಂದು ದಿನ ಸಂಜೆಯ ಹೊತ್ತಿಗೆ ಅವನು ನನಗೆ ಪೋನಾಯಿಸಿ " ನಿನ್ನ ಜೊತೆಗೆ ಮಾತಾಡಬೇಕು ಎನಿಸಿದೆ ಈ ಕ್ಷಣವೇ , ನನಗೇನು ಗೊತ್ತಿಲ್ಲ ಹೃದಯ ನಿನ್ನೊಡನೆ ಪಿಸುಗುಟ್ಟಲು ಬಯಸಿದೆ " ಅಂದಾಗ ನಾನು " ಹ್ಮ ನಿಜ ನನ್ನ ಹೃದಯ ಕೂಡ ನಿನ್ನೊಂದಿಗೆ ಮಾತಾಡಲು ಬಯಸಿದೆ " ಎಂದು ಒಂದೇ ಉಸಿರಿಗೆ ಹೇಳಿದ್ದೆ " ಅಷ್ಟಲ್ಲದೇ ನನ್ನ ಹೃದಯ ಬಡಿತ ಹೆಚ್ಚಾಗಿದೆ " ಅಂದೆ ಅದಕ್ಕೆ ಅವನು " ಹೇ ನನಗೂ ಕೂಡಾ ಹಾಗೆ ಅನಿಸಿದೆ " ಅಂತ ಹೇಳಿ " ಬಂದೆ ನಿಲ್ಲು " ಅಂತ ಕಾಯಿಸದೇ ನನ್ನ ಹತ್ತಿರಕ್ಕೆ ಧಾವಿಸಿ ಬಂದಿದ್ದ.
ಸಂಜೆಗೆ ಇಬ್ಬರು ಕಾಫಿ ಕುಡಿಯುತ್ತ ಇಬ್ಬರ ಬಗ್ಗೆ ಮಾತಾಡಿದ್ದೆ ಮಾತಾಡಿದ್ದು ಈ ನಡುವೆ ನಾನು ನನ್ನ ಬಗ್ಗೆ ಅವನಿಗೆಲ್ಲ ವಿವರಿಸಿದೆ. ತಾನೇಕೆ ಕೆಲಸಕ್ಕೆ ಹೋಗುತ್ತಿರುವುದು , ಮತ್ತೆ ನಾನೇಕೆ ಈಗ ಒಂಟಿಯಾಗಿರುವೆ ಎಂದು , ಬರೀ ಅವನೀಗ ಕಿವಿಯಾಗಿದ್ದ ಅಷ್ಟೇ .... ನನ್ನನೇ ರೆಪ್ಪೆ ಪಿಳುಕಿಸದೇ ನೋಡುತ್ತಿದ್ದ. ನನ್ನ ಪತಿಯ ಪಾರ್ಶ್ವವಾಯು ಹೊಡೆತದ ಕತೆ , ನನ್ನ ಅತ್ತೆ ಮನೆಯವರ ನಡುವಳಿಕೆ ನನ್ನೊಂದಿಗೆ ಇತ್ತೀಚಿನ ದಿನಗಳಲ್ಲಿ , ಗಂಡನಿಗೆ ಹುಷಾರಿಲ್ಲ ಎಂಬುದನ್ನು ತಿಳಿದ ಕೂಡಲೇ ಇದೇ ಸರಿಯಾದ ಸಮಯವೆಂದು ತಿಳಿದು ನಮ್ಮಿಬ್ಬರನ್ನು ಅಗಲಿಸುವ ಅವರ ಹುನ್ನಾರ ಎಲ್ಲವನ್ನೂ ನಾನು ಅವನಲ್ಲಿ ಹೇಳಿ ಹೃದಯ ಹಗುರ ಮಾಡಿಕೊಂಡಿದ್ದೆ. ಎಷ್ಟೊತ್ತು ಇಬ್ಬರು ಕೈಯಲ್ಲಿ ಕೈಹಿಡಿದು ಕುಳಿತ್ತಿದ್ದೇವೋ ಅರವಿಗೆ ಬಂದಿರಲಿಲ್ಲ.
ಅವನು ಆ ಸಂಜೆ ನನ್ನ ಬಿಟ್ಟು ಹೊರಟು ನಿಂತಾಗ ನನ್ನ ಮನಸ್ಸು ಅವನನ್ನು ಕಳಿಸಿ ಕೊಡಲು ಸಿದ್ದವಿಲ್ಲ. ಅವನು ನನ್ನ ಕೈಯಲ್ಲಿ ತನ್ನ ಕೈಯನಿಟ್ಟು ಮತ್ತೆ ಬರುವ ಭರವಸೆ ನೀಡಿದ.
ನನ್ನನ್ನು ಆಲಿಂಗಿಸಿ ಹಣೆಗೊಂದು ಹೂ ಮುತ್ತು ನೀಡಿ " Love you " ಎಂದಿದ್ದ ನಾನು ಅವನ ಎದೆಯೊಳಗೆ ಬಚ್ಚಿಟ್ಟುಕೊಂಡು " I
too " ಎಂದು ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದೆ. ಆ ಗಳಿಗೆಯಲ್ಲಿ ಇಬ್ಬರ ಹೃದಯ ಬಡಿತವೇ ಅಟ್ಟಕ್ಕೆ ಏರಿತ್ತು....
ಆ ಧೋ ಧೋ ಸುರಿಯುವ ಮಳೆಯಲ್ಲಿ ಅವನೊಂದಿಗೆ ಇಡೀ ರಾತ್ರಿ ಅವನೆದೆಯ ಮೇಲೆ ಹಾಯಾಗಿ ಮಲಗಿ ಸಂಪೂರ್ಣ ವಾಗಿ ನಾನು ನನ್ನನ್ನು ಅವನಿಗೆ ಸಮರ್ಪಿಸಿಕೊಂಡಿದ್ದೆ...!!!
ಇಬ್ಬರು ಕೈ ಹಿಡಿದು ಕುಳಿತ ಗಳಿಗೆ , ಸುರಿಯುವ ಮಳೆಯ ಆ ಶಬ್ದದ ನಿನಾದ , ಆ ಸಂಜೆಯ ಹೊತ್ತಿನ ಅಮಲೇರಿಸುವ ಗಾಳಿ ಮತ್ತು ಹಿತವೆನಿಸುವ ಇಬ್ಬರ ನಡುವೆ ಇರುವ ಆ ಚಹಾದ ಕಪ್ಪುಗಳು...!!!
ಈ ದಿನ ಮತ್ತೆ ನಾನು ನಿನ್ನೆದೆಯೊಳಗೆ ಬಚ್ಚಿಟ್ಟುಕೊಳ್ಳುವ ಹಂಬಲವಾಗಿದೆ. ಹೃದಯದ ದುಗುಡ ದುಮ್ಮಾನವನ್ನೆಲ್ಲ ಪಿಸುಗುಟ್ಟುವ ಆಸೆಯಾಗಿದೆ.
ಈ ಪ್ರೀತಿ ಮತ್ತು ನಾನು ನಿನಗಾಗಿ ಮತ್ತು ಕೇವಲ ನಿನಗಾಗಿಯೇ ಎಂದು ಹಾಡಬೇಕೆನಿಸಿದೆ. ನಿನಿಲ್ಲದೇ ನಾನು ಏನು ಅಲ್ಲವೇ ಅಲ್ಲ ನೀನೇ ನನಗೆಲ್ಲಾ ಎಂದು ಉಸಿರಲು ಹಾತೊರೆಯುತಿದೆ ಜೀವ ಅವನ ಮುಂದೆ ....!
ನೀನಿಲ್ಲದೇ ನನಗೇನಿದೆ ಒಲವೇ ......
ಹೃದಯ ತಡವರಿಸುತ್ತಲೇ ಜೋಂಪು ಹತ್ತಿದ್ದು ಗೊತ್ತಾಗಲೇ ಇಲ್ಲ ....!
ಮತ್ತೆ ಕಣ್ಬಿಟ್ಟಾಗ ಆರು ಮುಕ್ಕಾಲು ಆಗಿತ್ತು , ಮಳೆಯಂತೂ ಅದೇನೋ ಸಿಟ್ಟು ಇಟ್ಟುಕೊಂಡು ನಿಮ್ಮನ್ನು ಬಿಡುವುದಿಲ್ಲ ಎನ್ನುವಂತೆ ಒಂದೇ ಸಮನೆ ಸುರಿಯುತ್ತಲೇ ಇತ್ತು...
ಪ್ರೀತಿ ಯಾವಾಗ ಹುಟ್ಟುವುದೋ ಗೊತ್ತಾಗುವುದಿಲ್ಲ...
ಕನಸು ಕಂಗಳ ಚೆಲುವೆ
ಮೃದುಮಧುರ ಯಾತನೆ
ReplyDelete