ಶ್ರೀ ಅಮೃತೇಶ್ವರ ದೇವಸ್ಥಾನ ಅಣ್ಣಿಗೇರಿ

ಮಹಾ ಶಿವರಾತ್ರಿ ಹಬ್ಬದ ದಿನ ಮನೆಯಲ್ಲಿ ಶಿವನ ಪೂಜೆಯ ಮುಗಿಸಿ ನನಗೆ ಅಣ್ಣಿಗೇರಿಯ ಪುರಾತನ ಅಮೃತೇಶ್ವರ ದೇವಸ್ಥಾನ ಹೋಗುವ ಮನಸ್ಸಾಯಿತು. ಅದೊಂದು ದಿನ ಶಿವನ ದೇವಾಲಯಗಳ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತಾ ಇದ್ದೆ ಅದು ನಮ್ಮ ಧಾರವಾಡ , ಹುಬ್ಬಳ್ಳಿ ಹಾಗೂ ಬೆಳಗಾವಿ ಸಮೀಪ ಅಂತ ಆವಾಗ ಅಮೃತೇಶ್ವರ ದೇವಸ್ಥಾನ ಕೂಡಾ ಕಣ್ಣಿಗ ಬಿತ್ತು.

ತುಂಬಾ ಹಳೆಯ ದೇವಾಲಯ ಎಂದು ಓದಿದೆ. ಅದು ಆದಿ ಕವಿ ಪಂಪನ ಜನ್ಮಸ್ಥಳ ಎಂದು ತಿಳಿದ ಮೇಲೆ ಕುತೂಹಲ ಹೆಚ್ಚಿತು ಸರಿ ನನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿ ಹೊರಟೇ ಬಿಟ್ಟೆ. ಮನೆಯಲ್ಲಿ ಬಹಳ ಶ್ರದ್ಧೆಯಿಂದ ಶಿವನ ಪೂಜೆಯನ್ನು ಮಾಡಿ ಅವನನ್ನು ಆರಾಧಿಸಿ ಹೊರಟಿದ್ದರಿಂದ ಸ್ವಲ್ಪ ಬಿಸಿಲು ಶುರುವಾಗಿತ್ತು ಆದರೂ ಮನಸ್ಸು ಕೇಳಬೇಕಲ್ಲ ಹೊರಟೇ ಬಿಟ್ಟೆ.ಒಂದೊಂದು ಸಲ ನನ್ನ ಮನಸ್ಸು ತನ್ನದೇ ಹಠ ಸಾಧಿಸಲು ನಿಂತು ಬಿಡುತ್ತದೆ


ಹುಬ್ಬಳ್ಳಿ ಬಂದ ತಕ್ಷಣವೇ ದಾರಿ ಸ್ವಲ್ಪ ಕೇಳಬೇಕಿತ್ತು ಸ್ಕೂಟರ್ ನಿಲ್ಲಿಸಿ ಅಲ್ಲೊಬ್ಬರ ಕೇಳಿದೆ ಅದಕ್ಕೆ ಒಬ್ಬರು " ಹೀಗೆ ರೈಲ್ವೆ ನಿಲ್ದಾಣ ಹತ್ತಿರ ತಿರುಗಿ ನೇರವಾಗಿ ಹೋದರೆ ಸಾಕು ಅಣ್ಣಿಗೇರಿ ವರೆಗೆ ಹೋಗ್ತಿರಿ " ಅಂದರು. ಅದು ಹೆದ್ದಾರಿ ಮೇಲೆಯೇ ಇದೆ ಅಂದರು " ಹ್ಮೂಂ " ಇನ್ನೇನು ಸ್ಕೂಟರಿಗೆ ಎಕ್ ಸ್ಲೇಟರ್ ಕೊಟ್ಟು ಮುಂದು ನಡೆದೆ.

ಅಮೃತೇಶ್ವರ ದೇವಸ್ಥಾನವು ಅಣ್ಣಿಗೇರಿಯ ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ಸುಂದರ ಕಪ್ಪು ಕಲ್ಲಿನ ದೇವಾಲಯವಾಗಿದ್ದು  ಈ ದೇವಸ್ಥಾನದ ಮುಖ್ಯ ದೇವತೆ ಶಿವ. ಅಣ್ಣಿಗೇರಿಯು ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯದ ಪ್ರಮುಖ ಭಾಗವಾದ ಐತಿಹಾಸಿಕ ಪಟ್ಟಣವಾಗಿದ್ದು, ಹೊಯ್ಸಳರು, ಯಾದವರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಕನ್ನಡದ ಪ್ರಸಿದ್ಧ ಕವಿ ಆದಿ ಕವಿ, ಪಂಪನ ಜನ್ಮಸ್ಥಳ ಎಂದೂ  ಅಣ್ಣಿಗೇರಿ ಬಹಳ ಪ್ರಸಿದ್ಧವಾಗಿದೆ.

ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯ 1050 ರಲ್ಲಿ ಕಟ್ಟಲಾಗಿದೆ ಮತ್ತು ಅಮೃತೇಶ್ವರ ದೇವಾಲಯ ಕಲ್ಯಾಣದ ಚಾಲುಕ್ಯ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವು 76 ಕಂಬಗಳನ್ನು ಹೊಂದಿದ್ದು ದೇವಾಲಯದ ಗೋಡೆಗಳು ಪೌರಾಣಿಕ ಚಿತ್ರಣಗಳ ಕೆತ್ತನೆಗಳನ್ನು ಒಳಗೊಂಡಿದೆ.ಇನ್ನೂ ದೇವಾಲಯ ಕೂಡಾ ಅಮರಶಿಲ್ಪಿ ಜಕಣಾಚಾರಿ  ನಿರ್ಮಿಸಿದ್ದಾನೆ ಎಂದು ಜನ ಹೇಳುತ್ತಾರೆ. ಮೊದಲೇ ಶಿಲ್ಪಿ ಜಕಣಾಚಾರಿ ಎಷ್ಟೋ ಅಮರ ಐತಿಹಾಸಿಕ ದೇವಾಲಯ ನಿರ್ಮಿಸಿ ದಂತಕಥೆಯಾದ ಅಥವಾ ದಂತಕಥೆಯ ನಾಯಕ ಎಂದರೆ ತಪ್ಪಾಗಲಾರದು ಮತ್ತು ಇದರ ನಿರ್ಮಾಣ ಕೂಡ ಅವನದೇ ಕೊಡುಗೆ ಎಂದು ಇತಿಹಾಸ ಹೇಳುತ್ತದೆ.  

ಈ ದೇವಾಲಯವು ಇಟಗಿಯಲ್ಲಿರುವ ಮಹಾದೇವ ದೇವಸ್ಥಾನದ ನಂತರದ ರಚನೆಗಳಿಗೆ ಮಾದರಿಯಾಗಿದೆ ಜನ ಹೇಳುತ್ತಾರೆ.


ನೀವು ಏನಾದರೂ ಈ ದೇವಾಲಯಕ್ಕೆ ಭೇಟಿ ಕೊಡುವ ವಿಚಾರ ಮಾಡಿದರೆ " ನನ್ನ ಹಾಗೆ ಮಾರ್ಚ್ ತಿಂಗಳಲ್ಲಿ ಹೋಗಬ್ಯಾಡ್ರಿ ಯಾಕೆಂದರೆ ತುಂಬಾ ಬಿಸಿಲು ಕಲ್ಲ ಮೇಲೆ ಕಾಲಿಟ್ಟರೆ ಬೆಂಕಿಯಲ್ಲಿ ಇಟ್ಟಂತೆ ಅಷ್ಟೊಂದು ಕಾಯಿದಿರುತ್ತವೆ. ಅಣ್ಣಿಗೇರಿ ಹುಬ್ಬಳ್ಳಿಗೆ ತುಂಬಾ ಹತ್ತಿರ. ಹುಬ್ಬಳ್ಳಿಯಿಂದ 35 ಕಿ.ಮೀ ದೂರದಲ್ಲಿರುವ ಅಣ್ಣಿಗೇರಿಗೆ ಹುಬ್ಬಳ್ಳಿಯಿಂದ ಬಸ್ ಮೂಲಕ ಹೋಗಬಹುದು. ಈ ದೇವಸ್ಥಾನಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಡಿಸೆಂಬರ್ ಮತ್ತು ಜನವರಿ. ಇದು ದೇವಸ್ಥಾನದ ರಥೋತ್ಸವದ ಕಾರ್ ಉತ್ಸವದ ಸಮಯವಾಗಿದ್ದು, ರಥದಲ್ಲಿ ಅಮೃತೇಶ್ವರನ ವಿಗ್ರಹವನ್ನು ಮೆರವಣಿಗೆ ತರಲಾಗುತ್ತದೆ.

ಅಣ್ಣಿಗೇರಿ ಎಂಬುವುದು ಧಾರವಾಡ ಜಿಲ್ಲೆಯ ಒಂದು ಸಣ್ಣ ಶಹರವಾದರೂ ತನ್ನದೇ ಇತಿಹಾಸ ಹೊಂದಿದೆ ಮತ್ತು ಅನೇಕ ರಾಜವಂಶರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುವುದು ತಿಳಿದುಬರುತ್ತದೆ. ಇಲ್ಲಿ ಇತಿಹಾಸ ಪ್ರಸಿದ್ಧ  ಶಿಲೆಗಳಲ್ಲಿ ನಿರ್ಮಿಸಿದ ಮತ್ತು ದ್ರಾವಿಡ ಶೈಲಿಯಲ್ಲಿ ಇರುವ ಅಮೃತೇಶ್ವರ ದೇವಸ್ಥಾನವಿದ್ದು ಶಿವನ ಆರಾಧಕರನ್ನು ತನ್ನೆಡೆಗೆ ಸೆಳೆಯುತ್ತದೆ. ನೀವು ಗದಗ ಕಡೆಯಿಂದ ಬಂದರೆ ಗದಗದಿಂದ ಕೇವಲ 35 ಕಿಮೀ ದೂರದಲ್ಲಿದೆ.


ಒಂದು ಸಲ ನೀವೂ ಹೋಗಿ ಬರ್ರೀ....

ಕನಸು ಕಂಗಳ ಚೆಲುವೆ

ಪ್ರೇಮಾ...

ಪೋಟೋ ಕೃಪೆ : ದೇವಸ್ಥಾನಕ್ಕೆ ಬಂದ ಹುಬ್ಬಳ್ಳಿಯ ಅಪರಿಚಿತ ಯುವಕರು

ಥ್ಯಾಂಕ್ಸ್ ರಿ ಪಾ.....

ಹುಬ್ಬಳ್ಳಿ ಹುಡುಗರೇ..

ಶ್ರೀ ಅಮೃತೇಶ್ವರ ದೇವಸ್ಥಾನ ಅಣ್ಣಿಗೇರಿ ಶ್ರೀ ಅಮೃತೇಶ್ವರ ದೇವಸ್ಥಾನ ಅಣ್ಣಿಗೇರಿ Reviewed by ಕನಸು ಕಂಗಳ ಚೆಲುವೆ on July 02, 2024 Rating: 5

1 comment:

Contact For Website Designing - Low Rates
Mob: 9448841652
Powered by Blogger.