ಶ್ರೀ ಸೋಮೇಶ್ವರ ದೇವಾಲಯ ಧಾರವಾಡ

ಶ್ರೀ ಸೋಮೇಶ್ವರ ದೇವಾಲಯ

ಶ್ರೀ ಸೋಮೇಶ್ವರ ದೇವಾಲಯ

ಹೀಗೆಯೇ ಕಾಲೇಜಿನ ಸ್ಟಾಫ್ ರೂಮಿನಲ್ಲಿ ಕುಳಿತು ಮಾತನಾಡುವಾಗ ನಮ್ಮ ಶಿಕ್ಷಕಿಯೊಬ್ಬರು ನಾಳೆ ರವಿವಾರ ರೂಮಲ್ಲಿಯೇ ಇಡೀ ದಿನವೂ ಇರುವುದು ತುಂಬಾ ಬೋರ್ ನೋಡ್ರಿ ಮೇಡಂ ಅಂದರು ಆಗ ನಾನು  ಹಠಾತ್ತನೆ ಬರ್ರೀ ನನ್ನ ಜೊತೆಗೆ ಇಲ್ಲಿಯೇ ಧಾರವಾಡ ಸಮೀಪ ಇರುವ ಗುಡಿಗೆ ಹೋಗಿ ಬರೋಣ ಅಂದೆ. “ ಅವರು  ಹಂಗಾದ್ರ ನಡಿರಿ ಎಲ್ಲಿ ಹೋಗೋಣ  “ ಅಂತ ಕೇಳಿದರು ಆಗ ನನಗೆ ನೆನಪಾಯಿತು ಇನ್ನೊಂದು ವಾರ ಅಷ್ಟೇ ಮಹಾ ಶಿವರಾತ್ರಿ ಹಬ್ಬಕ್ಕೆ ಯಾಕೆ ನಾವು ಅಲ್ಲಿಗೆ ಹೋಗಿ ಬರಬಾರದು ಅನಿಸಿತು ಯಾಕೆಂದರೆ ನಾನು ಧಾರವಾಡಕ್ಕೆ ಹನ್ನೆರಡು ವರ್ಷಗಳ ಹಿಂದೆ ಬಂದಾಗ ಒಂದೇ ಸಾರಿ ಹೋಗಿದ್ದೆ ಅಷ್ಟೇ ಮತ್ತೆ ಕೆಲಸದ ಒತ್ತಡದಲ್ಲಿ ಹೋಗಿರಲಿಲ್ಲ ಅದಕ್ಕೆ ಅವರು ಸರಿ ಮೇಡಂ ನಾನು ಇನ್ನೂ ದೇವಾಲಯ ನೋಡಿಲ್ಲರಿ ,ಒಮ್ಮೆಯೂ ಹೋಗಿಲ್ಲ “  ಅಂದರು ಯಾಕೆಂದರೆ ಅವರ ಮೂಲ ಊರು ಮುಧೋಳ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕೆ ಅಂತ ಬಂದ್ರು , ಇಲ್ಲಿಯೇ ಬಿಎಡ್ ಕೂಡ ಮುಗಿಸಿ ಈಗ ವೃತ್ತಿ ಜೀವನ ಆರಂಭಿಸಿಯೂ ಆಗಿದೆ. ಸರಿ ನಾವು ಬೆಳಿಗ್ಗೆ 7 ಗಂಟೆಗೆ ತಯಾರಾಗಿ ಹೋಗುವ ನಿರ್ಧಾರ ಮಾಡಿದೇವು.

ಶಾಲ್ಮಲೆ ನದಿಯ ತಟದಲ್ಲಿ ನೆಲೆ ನಿಂತ ಶ್ರೀ ಸೋಮೇಶ್ವರ ದೇವಾಲಯಕ್ಕೆ ಭೇಟಿ ಕೊಡುವ ಭಾವನೆಯೇ ನಮ್ಮನ್ನು ಆಧ್ಯಾತ್ಮಿಕ ಲೋಕಕ್ಕೆ ಸೆಳೆಯಿತು. ಧಾರವಾಡ ಜಿಲ್ಲೆಯ ಶಹರದ ಶಿವನಿಗೆಂದೇ ಅರ್ಪಿತವಾದ  ದೇವಾಲಯಗಳಲ್ಲಿ ಧಾರವಾಡದ ಶ್ರೀ ಸೋಮೇಶ್ವರ ದೇವಸ್ಥಾನ ಬಹಳ ಪ್ರಮುಖವಾಗಿದೆ ಮತ್ತು ಇದಕ್ಕೆ ಧಾರವಾಡದ ದಕ್ಷಿಣ ಕಾಶಿ ಯೆಂದೇ ಜನರು ಕರೆಯುತ್ತಾರೆ

ಶಿವಲಿಂಗದ ಎದುರಿನಲ್ಲಿ ಇರುವ ನಂದಿ

ಶಿವನ ದೇವಾಲಯಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವು ಇದೆ. ಇತಿಹಾಸ ಬರವಣಿಗೆ ಹೊತ್ತ ಫಲಕವನ್ನು ದೇವಾಲಯದ ಒಳಗೆ ಪ್ರವೇಶಿಸಿಸುವಾಗ ನಮ್ಮ ಎಡಬದಿಯ ಗುಡಿಯ ಹಿಂಭಾಗದಲ್ಲಿ ನೇತು ಹಾಕಿದ್ದಾರೆ.

ಶಾಲ್ಮಲೆ ಎಂಬ ಹೆಸರೇ ನನ್ನನ್ನು ತುಂಬಾ ಆಕರ್ಷಿಸಿತ್ತು ಧಾರವಾಡದ ಸಾಕಷ್ಟು ಸಾಹಿತ್ಯಕ ಭಾಷಣಗಳಲ್ಲಿ ಧಾರವಾಡದ ಬಗ್ಗೆ ಭಾಷಣಮಾಡುವಾಗಲೆಲ್ಲ “  ಗುಪ್ತಗಾಮಿನಿ ಶಾಲ್ಮಲೆಯ ನದಿಯ ಮಡಿಲಲ್ಲಿ ಇರುವ ಧಾರವಾಡ ಎಂದು ಕೇಳಿದಾಗಲೆಲ್ಲ ಶಾಲ್ಮಲೆಯ ನದಿಯ ಉಗಮಸ್ಥಾನ ನೋಡುವ ಕುತೂಹಲ ಹೆಚ್ಚಾಗುತ್ತಿತ್ತು ಆದರೆ ಎಂದೂ ಹೋಗುವ ಸಮಯ ಕೂಡಿ ಬಂದಿರಲಿಲ್ಲ

ಶಿವಲಿಂಗು

ಹಿಂದೆ ಕೇಳಿದ  ದೇವಾಲಯದ ಇತಿಹಾಸದ ಬಗ್ಗೆ ಉತ್ಸುಕತೆ ಇತ್ತು ಅದನ್ನು ಅಲ್ಲಿ ಹಾಕಿದ ಫಲಕದಲ್ಲಿ ಓದುವಾಗ ಮೈಯಲ್ಲಿ ಪುಳುಕವಾಯಿತು.

ಮಹಾಭಾರತದ ಕಾಲದಲ್ಲಿ ಅಗಸ್ತ್ಯ ಮುನಿಗಳು ದಕ್ಷಿಣ ಭಾರತದ ಪ್ರವಾಸದಲ್ಲಿದ್ದಾಗ ಈ ಜಾಗದಲ್ಲಿ ವಿಶ್ರಮಿಸಿದ್ದರೆಂದು ಹಾಗೂ ಈ ಸಮಸ್ತ ಪ್ರದೇಶ ಕಗ್ಗಾಡಿನಲ್ಲಿದ್ದು, ಅಗಸ್ತ್ಯ ಮುನಿಗಳು ತಮ್ಮ ಅತೀಂದ್ರಿಯ ಶಕ್ತಿಗಳಿಂದ ಶಿವಲಿಂಗವನ್ನು ಸೃಷ್ಟಿಸಿ ಶಾಲ್ಮಲೆ ನದಿಯ ಉಗಮಸ್ಥಾನಕ್ಕೆ ನಾಂದಿ ಹಾಡಿ ಅದು ಗುಪ್ತಗಾಮಿನಿಯಾಗಿ ಹರಿಯಲು ಕಾರಣರಾದರು ಎಂಬ ಪ್ರತೀತಿ ಇದೆ. ಈ ದೇವಾಲಯವು ಹನ್ನೆರೆಡನೆಯ ಶತಮಾನದಲ್ಲಿ ಜಕಣಾಚಾರ್ಯರಿಂದ  ನಿರ್ಮಿತವಾಗಿದ್ದು


 ಎಂದೆನ್ನಾಲಾಗುತ್ತದೆ.ಬಹುಶಃ ಸೋಮೇಶ್ವರ ಗುಡಿಯು ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಶಿವಲಿಂಗಕ್ಕೆ  ಅರ್ಪಿತವಾದ ದೇವಾಲಯವಾಗಿದೆ. ಗುಡಿಯ ಒಳಗಿರುವ ಶಿವಲಿಂಗವು ನೈಸರ್ಗಿಕವಾಗಿ ನಿರ್ಮಿತವಾಗಿದೆ ಹೊರತು ಮಾನವ ನಿರ್ಮಿತ ವಾಗಿಲ್ಲವೆಂದು ಗುಡಿಯ ಒಳಗಡೆ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಯು ನಮಗೆ ಹೇಳಿದನು. ನಾವು ಶ್ರೀ ಸೋಮೇಶ್ವರ ದೇವಾಲಯಕ್ಕೆ ಹೋದಾಗ ಬಹುಶಃ ಮುಂಜಾನೆಯ 8 ಗಂಟೆ ಹೊಡೆದಿತ್ತು ಮತ್ತು ಒಳಗಡೆ ಹೆಜ್ಜೆ ಇಟ್ಟ ಕೂಡಲೇ ಅಗೋಚರ ಶಕ್ತಿಯ ಸಂಚಾರ ಮೈಯೊಳಗೆ ಹರಿದಾಡಿದಂತೆ ಭಾಸವಾಯಿತು. “ ಓಂ ನಮಃ ಶಿವಾಯ , ಓಂ ನಮಃ ಶಿವಾಯ  “ ಮಂತ್ರ ಘೋಷಣೆಯು ಇನ್ನಷ್ಟು ನನ್ನ ಮೈ ಮನವೆಲ್ಲವನ್ನು ಭಕ್ತಿ ಭಾವದಲ್ಲಿ ತಲ್ಲೀಣವಾಗುವಂತೆ ಮಾಡಿತ್ತು


ಶಿವನಿಗೆ ಬಿಲ್ವಪತ್ರೆ , ಹೂ ಗಳನ್ನು ಏರಿಸಿ ಆರತಿ ಮತ್ತು ಧೂಪಾರತಿ ಮಾಡುತ್ತ ಘಂಟೆ ಬಾರಿಸುತ್ತ ಗುಡಿಯ ಪೂಜಾರಿ ನಿಂತಿದ್ದರೆ ನಾವೆಲ್ಲರೂ ಶಿವನಿಗೆ ಕೈಮುಗಿದು ಓಂ ನಮಃ ಶಿವಾಯ ಎಂಬ ಮಂತ್ರ ಘೋಷಣೆಯ ಒಳಗೆ ಮಿಂದೆದ್ದೆವು.

ಸುಮಾರು ಅರ್ಧ ಗಂಟೆಯ ನಂತರ ಪೂಜೆ ಮುಗಿಸಿ ಪೂಜಾರಿಯೂ ತೀರ್ಥ ಪುಷ್ಪ ನೀಡಿದಾಗ ಅದನ್ನು ಸ್ವೀಕರಿಸಿ ಹಣೆಗೊತ್ತಿ ಬಾಯೊಳಗೆ ಹಾಕಿಕೊಳ್ಳುತ್ತ ಗುಡಿಯಿಂದ ಹೊರಗಡೆಗೆ ಹೆಜ್ಜೆ ಇಟ್ಟೆವು ಎದುರಿಗೆ ಪುಷ್ಕರಣಿ ಕಂಡಿತು ಪುಷ್ಕರಣಿ ಒಳಗಿರುವ ನೀರು ಪಚ್ಚೆ ಹಸಿರು ವರ್ಣಿತವಾಗಿದೆ ಗುಡಿಯ ಸನ್ನಿಧಿಯಲ್ಲಿ ಒಂದು ಮದುವೆ ಇತ್ತು ಅಂತ ಅನಿಸುತ್ತದೆ ಅದಕ್ಕೆ ಅಲ್ಲಿ ಪುಷ್ಕರಣಿ ಬಾಗಿಲಿಗೆ ನಿಂತು ಹೆಣ್ಣುಮಕ್ಕಳು ಪೂಜೆ ಸಲ್ಲಿಸಿ ಆರತಿ ಬೆಳಗುತ್ತಿದ್ದರು


ಶ್ರೀ ಸೋಮೇಶ್ವರ ಗುಡಿಯ ಸುತ್ತಮುತ್ತಲೂ ಇನ್ನು ನವಗ್ರಹ, ಶನೇಶ್ವರ ದೇವಸ್ಥಾನ, ದತ್ತಾತ್ರೇಯನ ಪಾದುಕೆ, ವೀರಭದ್ರೇಶ್ವರ ದೇವಸ್ಥಾನ, ಆಂಜನೇಯ ಗುಡಿ ಹೀಗೆ ಚಿಕ್ಕ ಚಿಕ್ಕ ದೇವಸ್ಥಾನಗಳಿವೆ.ನಾವು ಗುಡಿಯ ಎಡಬದಿಗೆ ಇರುವ ಹನುಮಂತ ದೇವರ ದರ್ಶನ ಮಾಡಿದೆವು. ಹನುಮಂತ ದೇವರ ಗುಡಿಯ ಪಕ್ಕದಲ್ಲಿ ಇರುವ ಮೆಟ್ಟಿಲುಗಳ ಏರಿ ಸ್ವಲ್ಪ ಮುಂದೆ ಬಂದ ತಕ್ಷಣವೇ ನಮ್ಮ ಕಣ್ಣಿಗೆ ಬಿಲ್ವಪತ್ರೆಯ ಮರ ಕಾಣಿಸಿತು ಶಿವನ ದೇವಾಲಯ ಮತ್ತು ಬಿಲ್ವಪತ್ರೆ ಮರ ಇಲ್ಲವೆಂದರೇ ಹೇಗೆ ? ಇಲ್ಲಿಯೂ ಬಿಲ್ವಪತ್ರೆ ಮರ ಹಾಗೂ ಬನ್ನಿ ಮರವು ಇದೆ.  ಶಿವನಿಗೆ ಬಿಲ್ವಪತ್ರೆ ಎಂದರೆ ಪ್ರಿಯವೆಂದು ಶಿವರಾತ್ರಿ ಹಬ್ಬದಂದು ಎಲ್ಲಾ ಭಕ್ತರು ಬಿಲ್ವಪತ್ರೆ ಹೂವುಗಳನ್ನು ಏರಿಸಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.


 ಇಷ್ಟ ಹೊತ್ತಿಗಾಗಲೇ ಸೂರ್ಯ ಪೂರ್ವದಿಕ್ಕಿನಲ್ಲಿ ಇನ್ನೂ ಮೇಲೇರಿ ಬರುತ್ತಿದ್ದ ಮಾರ್ಚ್ ತಿಂಗಳಾದ ಕಾರಣ ಬಿಸಿಲು  ಏರಿದ ಅನುಭವ ಆಯಿತು ನಾನು ಮೊದಲೇ ಮನೆಯಿಂದ ಬರುವಾಗ ನೀರು , ರಾಗಿ ಅಂಬಲಿ , ಶೇಂಗಾ ಚಟ್ನಿ , ಜೋಳದ ರೊಟ್ಟಿ , ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ ಜೊತೆಗೆ ಗಟ್ಟಿಯಾದ ಮೊಸರು ಎಲ್ಲವನ್ನು ಪ್ಯಾಕ್ ಮಾಡಿಕೊಂಡು ನನ್ನ ದ್ವಿಚಕ್ರ ವಾಹನದ ಡಿಕ್ಕಯೊಳಗೆ ಹಾಕಿಕೊಂಡು ಬಂದಿದ್ದೆ. ಅಲ್ಲಿಯೇ ಗುಡಿಯ ಪಕ್ಕದಲ್ಲಿ ಚಿಕ್ಕ ತೋಟದಂತಿದ್ದು ಅಲ್ಲಿ ಶಿವನ ಮೂರ್ತಿ ಇದ್ದು , ಮೂರ್ತಿ ಶಿವನು ಪರ್ವತದ ಮೇಲೆ ತಪಸ್ಸು ಮಾಡುವಂತಿದೆ. ಅದರ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಕುಳಿತು ಹಸಿದ ಹೊಟ್ಟೆಗೆ ಜೋಳದ ರೊಟ್ಟಿ ಸೇಂಗಾ ಚಟ್ನಿ ಮತ್ತು ರಾಗಿ ಅಂಬಲಿ ಕುಡಿದು ಇಳಿಸಿ ಹಸಿವು ನೀರಡಿಕೆ ತೀರಿಸಿಕೊಂಡೆವು.


ನಂತರ ಶಾಲ್ಮಲೆಯ ನದಿಯ ಉಗಮದ ಜಾಗಕ್ಕೆ ಹೋಗುವ ಎಂದು ಹೊರಟೆವು. ಶ್ರೀ ಸೋಮೇಶ್ವರ ದೇವಾಲಯ ದಿಂದ ಅರ್ಧ ಕಿಮೀ ಸ್ವಲ್ಪ ದೂರದಲ್ಲಿ ಇದೆ ಶಾಲ್ಮಲೆಯ ನದಿಯ ಜನ್ಮಸ್ಥಳ . ನದಿಯ ಪ್ರಾರಂಭದ ಸ್ಥಳವು ಕೊಳದ ಅಂಚಿನಲ್ಲಿರುವ ಸಣ್ಣ ದೇವಾಲಯದಲ್ಲಿದೆ.  ಸಂಗ್ರಹವಾಗುವ ನೀರು ಸ್ವಲ್ಪ ದೂರದವರೆಗೆ ಹರಿದು ಭೂಮಿಯೊಳಗೆ ಕಣ್ಮರೆಯಾಗಿ ಹೋಗುತ್ತದೆ. ಬಹಳಷ್ಟು ಜನರು ತಮ್ಮ ಸಮಸ್ಯೆಗಳನ್ನು ತೊಡೆದುಹಾಕಲು ನಂಬಿಕೆಯೊಂದಿಗೆ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಮತ್ತು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬರುತ್ತಾರೆ. 


ಇತರ ಯಾವುದೇ ಶಿವ ದೇವಾಲಯದಂತೆ ಇಲ್ಲಿಯೂ ಬಿಲ್ವ ಪತ್ರಿ ವೃಕ್ಷವು ಒಂದೆರಡು ಪುರಾತನ ಶಿಲ್ಪಗಳನ್ನು ಹೊಂದಿದೆ. ಕೊಳದ ನೀರು

 ಜಿನುಗುವಿಕೆಯಲ್ಲಿ ಉಕ್ಕಿ ಹರಿಯುತ್ತದೆ, ಸುಮಾರು 40 ಅಡಿಗಳಷ್ಟು ಹರಿಯುತ್ತದೆ ... ಮತ್ತೆ ಭೂಮಿಗೆ ಹೀರಲ್ಪಡುತ್ತದೆ.ಮುಂದೆ ಶಾಲ್ಮಲೆ ಅಘನಾಶಿನಿ ನದಿಯಾಗಿ ಕಾರವಾರದಲ್ಲಿ ಹರಿದು ಹೋಗಿ ಸಾಗರ ಸೇರುವಳು ಎಂದು ಜನರು ಇತಿಹಾಸಕಾರರು ಹೇಳುತ್ತಾರೆ.


ಸುತ್ತಮುತ್ತಲೂ ಹಸಿರಿನಿಂದ ಕಂಗೊಳಿಸುವ ಈ ದೇವಸ್ಥಾನಕ್ಕೆ ಮಹಾ ಶಿವರಾತ್ರಿದಿನದಂದು ಅಪಾರ ಭಕ್ತ ವೃಂದವೇ ಹರಿದು ಬರುತ್ತದೆ. ಧಾರವಾಡದಿಂದ ನಾಲ್ಕೂವರೆ ಕಿ.ಮೀ ದೂರದಲ್ಲಿ ಕಲಘಟಗಿ ಹೋಗುವ   ರಸ್ತೆಯಲ್ಲಿ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ ಶ್ರೀ ಸೋಮೇಶ್ವರ ದೇವಾಲಯ ಬರುತ್ತದೆ .

ಸ್ವಲ್ಪ ಹೊತ್ತು ಅಲ್ಲಿ ಮನ ತಣಿಯವರೆಗೂ ಕುಳಿತು ಮುಂದೆ ಅಲ್ಲಿಯೇ ಹತ್ತಿರದ ನುಗ್ಗಿಕೇರಿ ಹನುಮಂತ ದೇವರ ಗುಡಿಗೆ ಹೋಗಿ ಬರೋಣ ಎಂದು ಅತ್ತ ಕಡೆ ನನ್ನ ಡೂಯಟ್ ಗಾಡಿ ಸ್ಟಾರ್ಟ್ ಮಾಡಿ ಮುಂದೆ ಸಾಗಿದೇವು.


ಶ್ರೀ ಸೋಮೇಶ್ವರ ದೇವಾಲಯ ಧಾರವಾಡ ಶ್ರೀ ಸೋಮೇಶ್ವರ ದೇವಾಲಯ ಧಾರವಾಡ Reviewed by ಕನಸು ಕಂಗಳ ಚೆಲುವೆ on April 06, 2024 Rating: 5

No comments:

Contact For Website Designing - Low Rates
Mob: 9448841652
Powered by Blogger.