" ಆಕಾಶದ ಎದೆಯೊಳಗೆ ಸಂಜೆಯ ರಂಗಿನ ಚಿತ್ತಾರ "
ಧಾರವಾಡದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಅಷ್ಟೇ ಬಿಸಿಲಿನ ತಾಪ ಬೇರೆ ಹೆಚ್ಚೆ ಇತ್ತೆಂದರೆ ಸುಳ್ಳಲ್ಲ ಇದು (25 - 03 - 19 ) ರಂದು ನಡೆದ ಘಟನೆ ನೆನಪಿನ ಬರಹ....
ಮಧ್ಯಾಹ್ನದ ಹೊತ್ತಿಗೆ ಗುಡುಗು ಮಿಂಚು ಎರಡೂ ಆರ್ಭಟಿಸುತ್ತಿದ್ದವು. ಹೊರಗೆ ಮಳೆಯ ಸೂಚನೆ ಅಂತೂ ಬಂದಿತ್ತು ನಾನು ಬೆಳಿಗ್ಗೆಯಿಂದ ಬಣ್ಣಗಳ ಜೊತೆಗೂಡಿ ಒಂದಿಷ್ಟು ಕನ್ನಡ ಹಾಡುಗಳನ್ನು ಲಹರಿಯಲ್ಲಿ ಕೇಳುತ್ತಲೇ ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸುತ್ತ ಕುಳಿತಿದ್ದೆ. ಅಷ್ಟರಲ್ಲಿ ನನ್ನ ಫೋನು ರಿಂಗಣಿಸಿತು ಅತ್ತ ಕಡೆಯಿಂದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವೀಣಾ ಸಂಕನಗೌಡ ಮೆಡಮ್ " ಹೆಲೋ ಪ್ರೇಮಾ ಏನು ಮಾಡಾಕತ್ತೇರಿ ಮನಿ ಕಡೆ ಬರ್ರಿ ಸ್ವಲ್ಪ ಮಾತಾಡುವುದಿದೆ " ಅಂದರು ನಾನು " ಮೆಡಮ್ ನಾನು ಪೇಂಟಿಂಗ್ ಮಾಡತಾ ಇರುವೆ ಬಣ್ಣಗಳೆಲ್ಲ ಒಣಗಿ ಬಿಡುವವು ಬಂದರೆ ಸಂಜೆ ನೋಡುವೆ " ಅಂದೆ " ಇರಲಿ ಬಿಟ್ಟು ಬಾ ಪ್ರೇಮಾ ಮೇಘಾನು ಬರ್ತೆನಿ ಅಂದಿದ್ದಾಳೆ " ಅಂದರು " ಸರಿ ಮೆಡಮ್ ಬರುವೆ " ಎಂದೆ.
ಮನೆಯ ಹೊರಗೆ ಹೊಸತನದ ರಿಂಗಣ ಕೇಳಿಸಿತು.ಆಕಾಶದಲ್ಲಿ ಮೋಡಗಳ ಓಡಾಟ , ಜೋರಾಗಿ ಬೀಸುವ ಗಾಳಿ , ಆರ್ಭಟಿಸುವ ಗುಡುಗು , ಒಂದೊಂದೇ ಹನಿಗಳ ಸಿಂಚನ ಭುವಿಗೆ , ಮಳೆ ಹನಿಗಳ ಸೊಬಗು ಧರೆಗೆ ಹರುಷ ತಂದಂತೆ ಭಾಸವಾಯಿತು.ಮಳೆ ಹನಿಗಳ ಸಿಂಚನಕ್ಕೆ ಭುವಿಯು ಮುಗುಳ್ನಗೆ ಬೀರಿ ಮೆಲ್ಲಗೆ ಸುವಾಸನೆ ಹರಡಿದಳು. ಮಣ್ಣಿನ ಸುಗಂಧ ಪರಿಮಳ ಮನಕ್ಕೆ ಹಿತವನ್ನುಂಟು ಮಾಡಿತ್ತು ನನ್ನೊಳಗೆ ನೂರು ಭಾವಗಳು ಒಲವಿನ ರಾಗ ಮೀಟುತ್ತಿದ್ದವು. ನಾನು ಬಣ್ಣಗಳೆಲ್ಲ ಒಂದು ಬದಿಗೊತ್ತಿ ರೆಡಿಯಾದೆ ಹೋಗುವಾಗ ಸಂಜೆಯ ಆಗಮನವು ದಿಲ್ ಮೆ ತರಂಗ ಎಬ್ಬಿಸಿತ್ತು ಕೂಡಾ.
ಸಂಜೆಯ ಸೊಬಗಿನಲ್ಲಿ ನನ್ನ ಡುಯೆಟ್ ಗಾಡಿಯೂ ಸುರಿಯುವ ಮಳೆಯಲ್ಲಿ ಮಳೆಯನ್ನೇ ಲೆಕ್ಕಿಸದೇ ಗುನುಗುನಿಸುತ್ತಲೇ ನನ್ನ ಹೊತ್ತು ವೀಣಾ ಮೆಡಮ್ ಬಾಗಿಲ ಮುಂದೆ ಬಂದು ನಿಂತಿತು....
ಮೇಘಾ ಬಾಗಿಲು ತೆಗೆದು "ಮಳೆಯಲ್ಲಿ ತೊಯಿಸಿಕೊಂಡು ಬಂದೆಲ್ಲ ಪ್ರೇಮಾ" ಅಂದಳು ಹ್ಮೂಂ ಅಂದ ನಗುತ್ತಲೇ ಸ್ವಾಗತಿಸಿದ ವೀಣಾ ಮೆಡಮ್ " ಪ್ರೇಮಾ ಕಾಫಿ ಮಾಡಲೇನು ? " ಅನ್ನುತ್ತಲೇ ಅಡುಗೆ ಕೋಣೆ ಹೊಕ್ಕರು . ಅಷ್ಟರಲ್ಲಿ ನಾನು ಮೇಘಾಳಿಗೆ ಸುಂದರ ಕಿವಿಯೊಲೆ ತೊಗೊಂಡು ಹೋಗಿದ್ದೆನಲ್ಲ ಅವಳಿಗೆ ಕೊಟ್ಟು " ಹಾಕಿಕೊ" ಅಂದೆ .
ಮೊನ್ನೆ ಮೊನ್ನೆ ಸುಜಿ ( ಸುಜಾತಾ ಹಡಗಲಿ ) ಬಗ್ಗೆ ಬರೆದಿದ್ದೆನಲ್ಲ ಅವಳಿಗೊಂದು ಜೊತೆ ಕಿವಿಯೊಲೆ ಮತ್ತು ಮೇಘಾಳಿಗೊಂದು ತೆಗೆದುಕೊಂಡು ಇಟ್ಟಿದ್ದೆ ತುಂಬಾ ದಿನಗಳಿಂದ ಉಡುಗೊರೆ ಕೊಡಲೆಂದು.
ಕಿವಿಯಲ್ಲಿ ಹಾಕಿ ನೋಡಿ ಖುಷಿ ಪಟ್ಟ ಮೇಘಾಳ ಮುಖದಲ್ಲಿ ಮಂದಹಾಸ ನೋಡಿ ನನಗೆ ಖುಷಿಯಾಯಿತು.
ಉತ್ತರ ಕರ್ನಾಟಕ ಲೇಖಕಿಯರ ಸಂಘದ ಮಹಿಳಾ ದಿನಾಚರಣೆ ಆಚರಿಸುವ ನಿಮಿತ್ತ ಸಾಕಷ್ಟು ಚರ್ಚೆ ಮಾಡಿದೇವು. ಮಾರ್ಚ್ ಕೊನೆಯ ದಿನ ಆಚರಿಸುವ ಕುರಿತಾಗಿ ನಿಶ್ಚಿತವಾದ ಸಮಯ ಅದರ ತಯಾರಿಯ ಕುರಿತು ಮಾತುಕತೆ , ಚಹಾ ಚುರಮರಿ ಮುಗಿದ ಮೇಲೆ ಇನ್ನೇನು ಹೊರಡಲು ಅಣಿಯಾದೆವು ಅಷ್ಟರಲ್ಲಿ ನನಗೆ ಸಂಜೆಗೆ ಕೆಲಗೇರಿ ಮರದ ದಡದಲ್ಲಿ ವಿಹಾರಿಸುವ ಮನಸ್ಸಾಯಿತು. " ಮೆಡಮ್ ಬರ್ತಿರಾ " " ಸರಿ ಬರುವೆ " ಎಂದಾಗ ಗಾಡಿ ಮತ್ತೆ ಕೆಲಗೇರಿಗೆ ಹೋಗಿ ನಿಂತಿತು.
ಎಷ್ಟೋ ದಿನಗಳಾಗಿದ್ದವು ಆ ಕಡೆ ಹೋಗಿರಲಿಲ್ಲ ವೀಣಾ ಮೆಡಮ್ ಮತ್ತು ನಾನು ಹೆಜ್ಜೆ ಹಾಕತೊಡಗಿದೆವು. ಮನಸಿಗೆ ಹಿತವೆನಿಸುವ ಕೆರೆಯಲ್ಲಿ ಬಳಕುವ ನೀರ ಅಲೆಗಳು ಏನೇನೋ ಹಾಡುತ್ತಿದ್ದಂತೆ ಅನುಭವ. ದೂರದಲ್ಲಿ ದಿಟ್ಟಿಸಿದೆ ಕೆರೆಯ ಆ ಕಡೆಯ ತೀರದಲ್ಲಿ ತೆಂಗಿನ ಮರಗಳ ಗುಂಪು ಗಾಳಿಗೆ ಬಳುಕುತ್ತಿದ್ದವು. ಕೆರೆಯಲ್ಲಿ ನಿಧಾನವಾಗಿ ಸಾಗುತಿರುವ ಒಂದು ಪುಟ್ಟ ದೋಣಿ , ದೋಣಿ ನಡೆಸುವವನ ದೃಶ್ಯ ನನಗೆ ಕನ್ನಡ ಹಳೆ ಹಾಡೊಂದು ನೆನಪಿಸಿಸಿತು. " ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ " ಎಂಬುದನ್ನು. ವೀಣಾ ಮೆಡಮ್ ಮನಸ್ಸು ಹಗುರಾದಂತೆ " ಪ್ರೇಮಾ ಥ್ಯಾಂಕ್ಸವಾ ಇಲ್ಲಿಗೆ ಕರಕೊಂಡು ಬಂದಿದ್ದಕ್ಕ " ಅಂದರು. " ಯಾಕರಿ " ಅಂದೆ. ಅದಕ್ಕವರು " ಏನಿಲ್ಲ ಮೈಂಡ್ ಭಾರ ಆಗಿತ್ತು ಈಗ ಹಗುರಾಯಿತು " ಅಂದು ಕಿರುನಗೆ ನಕ್ಕರು. ಕವಿತೆಯ ಸಾಲುಗಳು ಹೃದಯದ ಭಾವ ಮೀಟಿ ಗುನುಗುನಿಸಿದವು ...
ಈ ಮಧುರ ಸಂಜೆಯು ನನಗೆ ಒಂಟಿಯಾಗಿ ಸಿಕ್ಕಿದೆಯಲ್ಲ ,
ಆದರೆ ನಾನೇನು ಮಾಡಲಿ ?
ನೀನೇ ನನ್ನ ಜೊತೆಗಿಲ್ಲವಲ್ಲ " ಎಂದು ಸತ್ತಾಡುವುದು ಮುಗಿಯುವ ಮುನ್ನ ಸಂಜೆಯ ತೋಳಿನಲಿ ಲಹರಿಯಲ್ಲಿ ಇರುವ ಎಲ್ಲಾ ಬಗೆಯ ಫೋಟೋ ನನ್ನ ಮೊಬೈಲ್ ಕ್ಯಾಮರದಲ್ಲಿ ಸೆರೆಹಿಡಿದೆ. ಅವುಗಳ ಭಾವಚಿತ್ರ ಒಂದೊಂದೇ ವೀಕ್ಷಿಸಿದಾಗ ಅನೇಕ ಭಾವಗಳನ್ನು ವೀಣೆ ಮೀಟಿದವು . ಹ್ಮೂಂ ಅವತ್ತೊಂದು ದಿನ ಹೀಗೆ ಸಂಜೆಗೆ ಕೆರೆಯ ದಡಪ್ರೇರಣೆಯಾಗಿತ್ತು. " ಹಕ್ಕಿ ನಡೆಸಿತ್ತು ನಲಿದಾಟ " ಎನ್ನುವ ಸುಂದರ ಕವನಕ್ಕೆ ಪ್ರೇರಣೆಯಾಗಿತ್ತು ಇಂದು ಹೊಸ ಕವಿತೆಯ ಜನನ ಹಾಗೂ ಮನ ಲಯದಲ್ಲಿ ಪ್ರೇಮ ಭಾವ ಮೀಟುತಿತ್ತು......
ಹೀಗೆ ಸಂಜೆ ಎಂದರೆ ನನಗೆ ಎಲ್ಲಿಲ್ಲದ ಪ್ರಿಯವಾದದ್ದು. ಅಲ್ಲಿ ಹುಟ್ಟುವ ಕವನ , ಅಲ್ಲಿ ಹುಟ್ಟುವ ಹೊಸ ಪ್ರಕೃತಿಯ ಚಿತ್ರ ಎಲ್ಲವೂ ಇಷ್ಟ. ಸಂಜೆ ಮುಳುಗುವ ರವಿ ಬಾನಲ್ಲಿ ಮಾತ್ರ ಚಿತ್ತಾರ ಬಿಡಿಸುವುದಿಲ್ಲ ಅವನು ನನ್ನೆದೆಯಲ್ಲಿಯೂ ಸಾವಿರಾರು ಸಾಲುಗಳ ಅಕ್ಷರಗಳ ಚಿತ್ತಾರ ಬಿಡಿಸುತ್ತಾನೆ.
ಅವನೆದೆಯ ಕೆಸರಿಯ ಬಣ್ಣ ನನ್ನೊಳು ಪ್ರೇಮರಾಗದ ಹಾಡು ಗುನುಗುನಿಸುತ್ತದೆ ಕೂಡ . ಏನೆಲ್ಲಾ ಇದೆ ಸಂಜೆಯ ಬಾನಿನ ಪ್ರಿಯಕರನ ಹೃದಯದಲ್ಲಿ.....
ಎಷ್ಟೋ ಭಾವಗಳ ಹೊತ್ತು ನಾವು ಹಿಂತಿರುಗಿ ಮನಿ ಕಡೆ ಹೆಜ್ಜೆ ಹಾಕಿದೇವು........
ಕನಸು ಕಂಗಳ ಚೆಲುವೆ
ಪ್ರೇಮಾ
ಎದೆಯೊಳಗೆ ರಂಗಿನ ಚಿತ್ತಾರ
Reviewed by ಕನಸು ಕಂಗಳ ಚೆಲುವೆ
on
March 25, 2022
Rating:
Reviewed by ಕನಸು ಕಂಗಳ ಚೆಲುವೆ
on
March 25, 2022
Rating:
No comments: