' ಶಿವನಿಗೆ ಸಮರ್ಪಿತ ಬೆಳಗಾವಿಯ ಪುರಾತನ ದೇವಾಲಯ ಶ್ರೀ ಕಪಿಲೇಶ್ವರ '

ದೇವ ಶಿವನು ಯೋಗಿಗಳಿಗೆ ಮಹಾಯೋಗಿ ತನ್ನ ನಂಬಿ ಬಂದ ಭಕ್ತರಿಗೆ ಸದಾ ವರವನ್ನು ಕೊಡುವವನು. ತನ್ನನ್ನು ಭಜಿಸಿದ ಭಕ್ತರಿಗೆ ಫಲವನ್ನು ಕೊಡುವವನು ಇಷ್ಟಲ್ಲದೆ ಭಕ್ತರ ಬೇಡಿಕೆಗಳನ್ನು ಪೂರೈಸುವಷ್ಟು ಅಖಂಡವಾದ ಐಶ್ವರ್ಯ ಸಂಪನ್ನ ನಮ್ಮ ಶಿವನು !

      ' ಸಾಂದರ್ಭಿಕ ಚಿತ್ರ '
ಮಹಾ ಶಿವರಾತ್ರಿ ಹಿಂದೂಗಳಿಗೆ ಬಹಳ ದೊಡ್ಡ ಧಾರ್ಮಿಕ ಹಬ್ಬ ಅಷ್ಟೇ ಅಲ್ಲದೆ ಬಹಳ ದೊಡ್ಡ ಪ್ರತಿಷ್ಠಿತ ಸಂದರ್ಭ ಕೂಡ ‌ಇನ್ನೂ "ಮಹಾ ಶಿವರಾತ್ರಿ" ಎಂದರೆ "ಶಿವನ ರಾತ್ರಿ"ಎಂದರ್ಥ. ಈ ದಿನದಂದು, ಶಿವನಲ್ಲಿ ನಂಬಿಕೆ ಇಡುವ ಲಕ್ಷಾಂತರ ಜನರು ಉಪವಾಸ ಇಡೀ ದಿನ ಮಾಡಿ,  ರಾತ್ರಿಯಲ್ಲ ಪ್ರಾರ್ಥನೆ  ಸಲ್ಲಿಸುತ್ತಾ ,  ಜಾಗರಣೆ ಮಾಡುತ್ತಾ,  ಅತ್ಯಂತ ಭಕ್ತಿ ಭಾವದಿಂದ ಆಚರಿಸುವರು.ಇನ್ನೂ ನಮ್ಮ ಭಾರತದ ತುಂಬೆಲ್ಲಾ ಶಿವನಿಗೆ ಸಮರ್ಪಿತ ದೇವಾಲಯಗಳಲ್ಲಿ ಮಹಾ ಶಿವರಾತ್ರಿಯ ದಿನದಂದು ವಿಶೇಷವಾದ ಅಲಂಕಾರ ಮತ್ತು ಶಿವನಿಗೆ ವಿಶೇಷವಾದ ಪೂಜೆಯನ್ನು ಭಕ್ತಗಣ ಸಲ್ಲಿಸಿ ತಲೆ ಬಾಗುತ್ತಾರೆ.           ' ಸಾಂದರ್ಭಿಕ ಚಿತ್ರ '

ಜಗದ ಒಳಿತಿಗಾಗಿ ಶಿವನ ಅವತಾರ ಹಲವು : 

ಶಿವನ ಅವತಾರಗಳ ಬಗ್ಗೆ ನಮ್ಮ ಪುರಾಣದಲ್ಲಿ ಅನೇಕ ಕತೆಗಳು ಇವೆ ಮಹಾ ಶಿವರಾತ್ರಿಯ ದಿನ ಬ್ರಹ್ಮನ ಸಹಾಯದಿಂದ ಶಿವನು ರುದ್ರನಾಗಿ ಹೇಗೆ ಕಾಣಿಸಿಕೊಂಡ ಎನ್ನುವುದಲ್ಲದೇ ಈ ರಾತ್ರಿ ಶಿವನು ರುದ್ರ ತಾಂಡವ ನೃತ್ಯವನ್ನು ಮಾಡಿದನು ಎಂಬುದರ ಕುರಿತಾಗಿ ಕತೆ ಹೇಳಲಾಗುತ್ತದೆ. ಶಿವರಾತ್ರಿಯ ಮತ್ತೊಂದು ಮಹತ್ವದ ಪುರಾಣ ಕಥೆ ಎಂದರೆ ಶಿವನು ತನ್ನ ಮೊದಲ ಪತ್ನಿ ಸತಿಯು ನಿಧನಳಾದಳು ಎಂಬ ಸುದ್ದಿ ಕೇಳಿದ ಕೂಡಲೇ ಈ ಸೃಷ್ಟಿ ರಕ್ಷಣೆ ಹಾಗೂ ವಿನಾಶದ ನೃತವನ್ನು ಮಾಡಿದನೆಂದು ಹೇಳುವುದು. 
ಇನ್ನೂ ಸಮುದ್ರ ಮಂಥನದ ಕತೆ ಯಾರಿಗೆ ಗೊತ್ತಿಲ್ಲ ಹೇಳಿ !! ಸಮುದ್ರ ಮಂಥನ ಮಾಡುವಾಗ ಜಗತ್ತನ್ನೇ ನಾಶ ಮಾಡುವ ವಿಷದ ಬಟ್ಟಲು ಒಮ್ಮೆಲೆ ಬಂದಾಗ ಜಗದ ಒಳಿತಿಗಾಗಿ ಜಗತ್ತನ್ನು ರಕ್ಷಿಸಲು ವಿಷವನ್ನು ಕುಡಿದು ಶಿವನು ಎಲ್ಲರನ್ನು ರಕ್ಷಿಸಿದನು.

        ಶ್ರೀ ಕಪಿಲೇಶ್ವರ ಗುಡಿ ಬೆಳಗಾವಿ

 ವಿಷವು ಕಂಠದಿಂದ ಇಳಿಯುವಾಗ ಅವನ ಪಟ್ಟ ಕಷ್ಟ ಹೇಳತಿರದು ಆದರೆ ಅವನು ಜಗದ ರಕ್ಷಕ ಜನರಿಗಾಗಿ ಆ ನೋವು ಸಹಿಸಿಕೊಂಡನು ಅದಕ್ಕಾಗಿ ಅವನನ್ನು‘ ನೀಲಕಂಠೇಶ್ವರ’ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಮಹಾಶಿವರಾತ್ರಿ ಹಬ್ಬವು ವಿಶೇಷವಾಗಿ ಶಿವನು ವಿಶ್ವವನ್ನು ಉಳಿಸಿದ್ದಕ್ಕಾಗಿ ಅವನಿಗೆ ಧನ್ಯವಾದಗಳನ್ನು ಅರ್ಪಿಸುವ ಸಮಯವಾಗಿದೆ

ಶ್ರೀ ಕಪಿಲೇಶ್ವರ ಗುಡಿ ಬೆಳಗಾವಿ

ನಾನು ಚಿಕ್ಕಂದಿನಿಂದಲೂ ಕೇಳಿಕೊಂಡ ಕತೆಗಳಲ್ಲಿ ಶಿವನೆಂದರೆ ತುಂಬಾ ಮುಗ್ದ , ಯಾರಾದರೂ ಭಕ್ತಿಯಿಂದ ಏನನ್ನು ಕೇಳಿದರೂ ಕೂಡಲೇ ತಥಾಸ್ತು ಎಂದು ಬಿಡುವವ. ಸಾಮಾನ್ಯವಾಗಿ ದೇವತೆಗಳ ಪೂಜೆಯನ್ನು ರಾತ್ರಿ ವೇಳೆಯಲ್ಲಿ ಮಾಡುವುದು ಸರಿಯಲ್ಲ ಮತ್ತು ನಾನು ಯಾವತ್ತೂ ನೋಡಲು ಇಲ್ಲ ಆದರೆ ಶಿವನ ಪೂಜೆ , ಭಜನೆ ಮಾತ್ರ ರಾತ್ರಿಯಲ್ಲಿಯೇ ನಡೆಯುತ್ತದೆ. ನಮ್ಮ ಭೋಲೆ ಶಂಕರನು ಮಾತ್ರ ಭಕ್ತಿಯಿಂದ ರಾತ್ರಿ ಪೂಜಿಸಿ , ಭಜಿಸಿದರೆ ಕೃಪೆ ಮಾಡುತ್ತಾನೆ. ಅಂದಿನ ಇಡೀ ರಾತ್ರಿ ಶಿವನಪೂಜೆಗೆ ಶುಭಕಾಲವಾದರೆ ಅದೇ ಆತನ ಭಕ್ತರಿಗೆ ಅದು ಬಹಳ ಮಂಗಳಕರ ಸಮಯ.

' ಸಾಂದರ್ಭಿಕ ಚಿತ್ರ '
ನಾನು ಚಿಕ್ಕಂದಿನಿಂದಲೂ ಬೆಳಗಾವಿಯಲ್ಲಿ ಇದ್ದಾಗ ನೋಡುತ್ತಾ ಬಂದಿದ್ದೆ ನಮ್ಮ ತಂದೆಯ ತಾಯಿ ಸಂಗಮ್ಮಾ ಶ್ರಿಂಗಾರಿ ಸೋಮವಾರ ಬಂತೆಂದರೆ ಶ್ರೀ ಕಪಿಲೇಶ್ವರ ಗುಡಿಗೆ ಹೋಗಿ ಬರುವುದು ಮನೆಯು ರೈತರ ಮನೆಯಾಗಿರುವುದರಿಂದ ಅಮ್ಮ ( ಉತ್ತರ ಕರ್ನಾಟಕದ ಭಾಗದಲ್ಲಿ ಅಜ್ಜಿಗೆ ಅಮ್ಮ ಅಂತ ಕರೆಯುವುದು ವಾಡಿಕೆ ) ಅವಳ ಅಡಿಗೆ, ಅವಳ ಮನೆಯ ದೇವರುಗಳ ಪೂಜೆ ಮುಗಿಸಿ ಸಂಜೆಗೆ ಗುಡಿಗೆ ಹೋಗುವುದು ರೂಢಿ ಮಾಡಿಕೊಂಡಿದ್ದಳು ಜೊತೆಗೆ ನನ್ನ ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು " ಬಾರ... ಕಮಲವ್ವ ಹೊತ್ತ ಅಕ್ಕೇತಿ ಲಗೂನ ಹೋಗಿ ಬರೂಣ " ಅಂತ . ಮತ್ತು ನಾವೆಲ್ಲ ನಾನು ನನ್ನ ತಂಗಿ ಚಿಕ್ಕವರು ಇರುವುದರಿಂದ ಅಮ್ಮ - ಅವ್ವ ನಮ್ಮನ್ನು ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು ಒಂದೊಂದು ಸಲ ಮಾತ್ರ ನೀವು ಬರ್ರೀ ಅಂತ ಎಳಕೊಂಡು ಹೋಗುತ್ತಿದ್ದರು ಮನೆಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ ಶ್ರೀ ಕಪಿಲೇಶ್ವರ ಗುಡಿ. 

      ಶ್ರೀ ಕಪಿಲೇಶ್ವರ ಗುಡಿ ಬೆಳಗಾವಿ

ಅಲ್ಲಿ ಹೋಗಿ ನಮಸ್ಕಾರ ಮಾಡಿ ಸ್ವಲ್ಪ ಹೊತ್ತು ಕುಳಿತು ಬರುತ್ತಿದ್ದೇವು. ಬರುವಾಗ ದಾರಿಯಲ್ಲಿ ಬೆಳಗಾವಿ ಹಳೆ ಪೂನಾ ಬೆಂಗಳೂರು ರಸ್ತೆಗೆ ಹತ್ತಿಕೊಂಡಿರು ಹೊಸೂರ ಬಸವನ ಗಲ್ಲಿ ಇದೆ ಅಲ್ಲಿ ಒಂದು ಬಸವಣ್ಣನ ದೇವಸ್ಥಾನ ತುಂಬಾ ಹಳೆಯದು ಅಲ್ಲಿ ಬಸವಣ್ಣನ ದರ್ಶನ ಮಾಡಿಕೊಂಡು ಮನೆಗೆ ಬರುವುದು ಅವಳ ಭಕ್ತಿ.ಇನ್ನೂ ಬಸವನ ಗುಡಿ ಜಾತ್ರೆಯ ದಿನದಂದು ಭಕ್ತರು ಗುಡಿಯ ಮುಂದೆ ಬೆಂಕಿಯಲ್ಲಿ ಹಾಯ್ದು ಹೋಗುವುದನ್ನು ನೋಡಲು ಹೋದರೆ ಸಾಕು ಮಧ್ಯರಾತ್ರಿಯಲ್ಲಿ ಬರುವರು ಅದಕ್ಕೆ ಅವರಿಬ್ಬರೂ ನಮ್ಮಿಬ್ಬರನ್ನು ಒಬ್ಬೊಬ್ಬರಾಗಿ ಕೈ ಹಿಡಿದು ಹೊಲದಿಂದ ಗುಡಿಯ ವರೆಗೂ ಕರೆದುಕೊಂಡು ಹೋಗುವುದು ಇನ್ನೂ ನೆನಪಿದೆ. ನಾನು ಯಾವಾಗ ಆ ಬಸವನ ಗುಡಿಯ ಮುಂದೆ ನನ್ನ ಸ್ಕೂಟಿಯಲ್ಲಿ ಹೋಗತಾ ಇರುತ್ತೇನೋ ಆವಾಗ ಬಾಲ್ಯದ ಜಾತ್ರೆಯಂತೂ ನೆನಪಾಗುವುದು ಖಂಡಿತ.ಹೀಗೆ ನಮ್ಮ ಅಮ್ಮ ಶ್ರೀಂಗಾರಿ ಸಂಗಮ್ಮನ ಭಕ್ತಿಯ ಭಾವ ಮನೆಯಲ್ಲಿಯೂ ಅಷ್ಟೇ ನಮ್ಮಮ್ಮ ಪೂಜೆಯನ್ನು ಮಾಡಲು ಕುಳಿತರೆ ಸುಮಾರು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದಳು ಮತ್ತು ಅವಳ ಲಿಂಗಪೂಜೆ ಮುಗಿದ ಮೇಲೆಯೇ ಅವಳು  ಊಟಕ್ಕೆ ಕೊಡುವುದು ಎಲ್ಲರಿಗೂ ! ಅವಳ ಪೂಜೆಯ ಪುರಾಣ ಕಥೆ ಎಂದರೆ ಉಫ್ ಸಮಯ ಹೋದದ್ದು ತಿಳಿಯುವುದಿಲ್ಲ ಈಗ ನಾವೆಲ್ಲರೂ ಬಾಲ್ಯದಿಂದಲೂ ನೋಡಿದ ಕಪಿಲೇಶ್ವರ ಗುಡಿ ಬಗ್ಗೆ ಈ ಶಿವರಾತ್ರಿಯ ಸಮಯದಲ್ಲಿ ಹೇಳುವುದು ಸೂಕ್ತವೆಂದು ತಿಳಿಯುತ್ತದೆ.....

ಸಾಂದರ್ಭಿಕ ಚಿತ್ರ
ಬೆಳಗಾವಿಯ ಶ್ರೀ ಕಪಿಲೇಶ್ವರ ಶಿವ ದೇವಾಲಯ :
ಈ ಕಪಿಲೇಶ್ವರ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಮತ್ತು ಜಾಗೃತ ದೇವಾಲಯವೆಂದು ಹೇಳುತ್ತಾರೆ. ಇಲ್ಲಿಯ ಶಿವಲಿಂಗವನ್ನು ಮಹಾನ್ ಋಷಿ ಕಪಿಲ ಮುನಿ ಸ್ಥಾಪಿಸಿದರ ಬಗ್ಗೆ ಗುಡಿಯ ಪಕ್ಕದಲ್ಲಿ ದೊಡ್ಡ ಫಲಕದ ಮೇಲೆ ಬರೆಯಲಾಗಿದೆ. ಈ ದೇವಾಲಯದ ಜ್ಯೋತಿರ್ಲಿಂಗವು ವಿಶಿಷ್ಟವು ಮತ್ತು ಪವಿತ್ರವಾದದ್ದು ಜನ ನಂಬಿದ್ದಾರೆ.ಇದು ಕೇವಲ ಬೆಳಗಾವಿಗೆ ಸೀಮಿತವಾಗಿರದೆ ಇಡೀ ಭಾರತಕ್ಕೆ ಇದರ ವ್ಯಾಪ್ತಿ ವ್ಯಾಪಕವಾಗಿ ಹರಡಿದೆ. ಹಿಂದಿನಿಂದಲೂ ಜನರ ಬಾಯಲ್ಲಿ ಒಂದು ನಂಬಿಕೆ ಇದೆ ಏನೆಂದರೆ ಈ ಕಪಿಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಭಕ್ತರ ಚಾರ್‌ಧಾಮ್ ಯಾತ್ರೆಯು ಸಂಪೂರ್ಣಗೊಳ್ಳುತ್ತದೆ ಎಂದು..

ಶ್ರೀ ಕಪಿಲೇಶ್ವರ ಜ್ಯೋತಿರ್ಲಿಂಗ 
ಶ್ರೀ ಕಪಿಲ ಋಷಿಗಳು ಈ ಜ್ಯೋತಿರ್ಲಿಂಗ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ ಅಲ್ಲದೆ ಅಲ್ಲಿಯ ಅಗ್ನಿಶಾಮಕ ಸ್ಥಳ ಇನ್ನೂ ಜೀವಂತವಾಗಿದೆ.ಇದಕ್ಕೆ ಇನ್ನೂ ಪುರಾವೆ ಬೇಕೆಂದರೆ 11 ನೇ ಶತಮಾನದಲ್ಲಿ ಕಿಲ್ಲಾ ಕೋಟೆ ಬೆಳಗಾವಿಯಲ್ಲಿ ನಿರ್ಮಿಸಲಾದ ಕಮಲ್ ಬಸ್ತಿಯಲ್ಲಿ ಶ್ರೀ ಕಪಿಲೇಶ್ವರ ದೇವಾಲಯದ ಬಗ್ಗೆಯೇ ಉಲ್ಲೇಖಿಸಲಾಗಿದೆ ಮತ್ತು ಈ ಅತ್ಯಂತ ಬಲವಾದ ಪುರಾವೆ ಸಾಕಲ್ಲವೇ ಶ್ರೀ ಕಪಿಲೇಶ್ವರ ದೇವಾಲಯವು ಪುರಾತನ, ಜಾಗೃತ ಮತ್ತು ಶ್ರೇಷ್ಠ ಜ್ಯೋತಿರ್ಲಿಂಗವಾಗಿದೆ ಎಂಬುದಕ್ಕೆ ? ಮತ್ತೆ ಬೇರೆಲ್ಲೂ ಕಾಣಲು ಸಿಗದ ಶ್ರೀ ಕಪಿಲೇಶ್ವರ ಮತ್ತು ಶ್ರೀ ವಿಷ್ಣುವಿನ ಮೂರ್ತಿಗಳು ಎದುರು ಬದುರು ಇರುವುದು ಅಪರೂಪದ ದೃಶವಾಗಿದೆ.ಅಂದರೆ ಹರ ಮತ್ತು ಹರಿ ಮೂರ್ತಿ ಪರಸ್ಪರ ಮುಖಾಮುಖಿ ನಿಂತಿರುವ ದೇವಾಲಯ ಭಾರತದಲ್ಲಿ ಇದೊಂದೇ ಎಂಬ ಹೆಗ್ಗಳಿಕೆ ಈ ದೇವಾಲಯಕ್ಕೆ.

ಶ್ರೀ ಕಪಿಲೇಶ್ವರ ಗುಡಿ ಬೆಳಗಾವಿ 

ಈ ದೇವಸ್ಥಾನಕ್ಕೆ ದಕ್ಷೀಣಕಾಶಿ ಎಂದು ಕರೆಯಲು ಕಾರಣವೆಂದರೆ ಉತ್ತರದ ಕಾಶಿಯಷ್ಟೆ ಮಹತ್ವವಾಗಿದ್ದಕ್ಕೆ. ಕ್ರಿಶ 1500ರಲ್ಲಿ ಈ ಕಪಿಲೇಶ್ವರ ಜಾಗದಲ್ಲಿ ಕಪಿಲ ಮುನಿಗಳು ತಪಸ್ಸನ್ನು ಮಾಡಿದ್ದರು ಎಂಬುದು ಮತ್ತು ಇವರ ಶಕ್ತಿಯಿಂದಲೇ ಶಿವನ ಮೂರ್ತಿ ಇಲ್ಲಿ ಉದ್ಭವಿಸಿದ ಕಾರಣಕ್ಕಾಗಿಯೇ ಇದಕ್ಕೆ ಕಪಿಲೇಶ್ವರ ಎಂಬ ಹೆಸರು ಬಂತು ಅಂತ ಹೇಳ್ತಾರೆ. ಶಂಕರಾಚಾರ್ಯರು ಕೂಡ ತಮ್ಮ ಶಿಷ್ಯರನ್ನು ಕರೆದುಕೊಂಡು ಇಲ್ಲಿಗೆ ಬಂದು ಪೂಜೆಯನ್ನು ಮಾಡಿ ಹೋಮ ಇತ್ಯಾದಿ ಸಲ್ಲಿಸಿದ್ದರು ಅಂತ ಕೂಡ ಪ್ರತೀತಿ ಇದೆ. ಇಷ್ಟಲ್ಲದೆ ಇಲ್ಲಿಗೆ ಸ್ವಾಮಿ ವಿವೇಕಾನಂದರು ಹಾಗೂ ಭಾರತದ ಪಿತಾಮಹ ಮಹಾತ್ಮ ಗಾಂಧಿಯವರು1924 ರಲ್ಲಿಭೇಟಿ ನೀಡಿದ್ದರು ಅಂತ ಹೇಳುತ್ತಾರೆ. 

ಶ್ರೀ ಕಪಿಲೇಶ್ವರ ಗುಡಿ ಬೆಳಗಾವಿ

ಪೂರ್ವಾಭಿಮುಖದ ದೇವಾಲಯವು ಎರಡಂತಸ್ತಿನ ಛಾವಣಿ ಹೊಂದಿದ್ದು ಗರ್ಭಗೃಹ, ಅಂತರಾಳ, ನವರಂಗ, ಸಭಾ ಮಂಟಪ ಮತ್ತು ಪ್ರದಕ್ಷಿಣ ಪಥಗಳನ್ನು ಒಳಗೊಂಡಿದೆ ಗರ್ಭಗೃಹದಲ್ಲಿ ಶಿವಲಿಂಗವಿದೆ. ದೇವಾಲಯದ ಎಡ ಪಾಶ್ರ್ವದಲ್ಲಿ ನವಗೃಹ ಮಂದಿರವಿದೆ. ಹೊರ ಆವರಣದಲ್ಲಿ ಶಿವ, ವೀರಭದ್ರ, ಕಾಳಭೈರವ ಮತ್ತು ಅನೇಕ ನಾಗಶಿಲ್ಪಗಳಿವೆ. 11ನೇ ಶತಮಾನಕ್ಕೆ ಸೇರಿದ ನಿಂತ ಭಂಗಿಯಲ್ಲಿರುವ ಚತುರ್ಭುಜಧಾರಿ ಕಾಳಭೈರವ ಮೂರ್ತಿ ತೆರೆದ ಗರ್ಭಗೃಹದಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿದೆ ಪುರಾತನ ದೇವಾಲಯದ ಜೀರ್ಣೋದ್ಧಾರ 19ನೇ ಶತಮಾನದ ಆರಂಭದಲ್ಲಿ ಆಗಿದೆ ಮತ್ತು ಆವರಣದ ವಿಷ್ಣು ಮಂದಿರಕ್ಕೆ ಹೊಸ ರೂಪ ಬಂದಿದೆ. ದೇವಾಲಯದ ಆವರಣದಲ್ಲಿ ದತ್ತ ಮಂದಿರ, ಸಾಯಿ ಮಂದಿರ, ಗಣೇಶ ಮಂದಿರ, ನಾಗ ದೇವತೆ ಮೂರ್ತಿಗಳು ನಿರ್ಮಾಣಗೊಂಡಿವೆ

' ಸಾಂದರ್ಭಿಕ ಚಿತ್ರ '

ಬೆಳಗಾವಿ ಜಿಲ್ಲೆಯ ಭಕ್ತ  ಜನರ ಭೂಕೈಲಾಸ ಎನಿಸಿಕೊಂಡಿರುವ ಕಪಿಲೇಶ್ವರ ದೇವಸ್ಥಾನಕ್ಕೆ ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಜನರ ದಟ್ಟಣೆ ಜಾಸ್ತಿ ಇರುತ್ತದೆ. ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ರಾಜ್ಯದ ಭಕ್ತರು ಕಪಿಲೇಶ್ವರನ ಗುಡಿಗೆ ಬರುವರು ಅದಲ್ಲದೇ ಉತ್ತರ ಭಾರತದಿಂದಲೂ ಭಕ್ತರು ಕಪಿಲೇಶ್ವರ ದರ್ಶನಕ್ಕೆ ಬರುತ್ತಾರೆ.ದೇಶದಲ್ಲಿನ 12 ಜ್ಯೋತಿರ್ಲಿಂಗ ಮತ್ತು ನಾಲ್ಕು ಚಾರ್‌ಧಾಮಗಳ ದರ್ಶನ ಮಾಡಿ ಗಂಗೆಯ ನೀರು ತಂದು ಜನರು ಕಪಿಲೇಶ್ವರ ದೇವಸ್ಥಾನದ ಜಲಕುಂಡದಲ್ಲಿ ಹಾಕಿ ಸ್ನಾನ ಮಾಡಿ ದರ್ಶನ ಪಡೆದು ತಮ್ಮ ಯಾತ್ರೆಯು ಇಲ್ಲಿಗೆ ಪೂರ್ಣಗೊಂಡಿತು ಎಂದು ಹರ್ಷಿಸಿ ಜೀವನದ ಮುಕ್ತಿ ಸಿಕ್ಕಿತು ನೆಮ್ಮದಿಯ ಉಸಿರು ಬಿಡುತ್ತಾರೆ.


ಶ್ರೀ ಕಪಿಲೇಶ್ವರ ಗುಡಿ ಬೆಳಗಾವಿ ( ಸತಿ ಮರಣಾನಂತರದ ಶಿವನ ಉಗ್ರ ಚಿತ್ರ )

ಇನ್ನೇನು ಹೇಳಲಿ ಈ ಗುಡಿಯ ಬಗ್ಗೆ ? ಈ ಕಪಿಲೇಶ್ವರನ ದೇವಾಲಯದಲ್ಲಿ ನಿತ್ಯ ಪೂಜೆ, ಅಭಿಷೇಕ ಅಲ್ಲದೆ ಶ್ರಾವಣ ಮಾಸದಲ್ಲಿ ವಿಶೇಷವಾದ ಪೂಜೆ ನೈವೇದ್ಯಗಳು ಜರುಗುತ್ತವೆ ಅಲ್ಲದೆ ಶ್ರಾವಣದಲ್ಲಿ ನಿತ್ಯ ದಾಸೋಹವಿದ್ದು ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಪ್ರತಿ ಸೋಮವಾರ ರುದ್ರಾಭಿಷೇಕ , ಶಿವನ ಚರಿತ್ರೆ , ಮಂತ್ರ ಪಠಣಗಳು ಜರುಗುತ್ತವೆ. ದೇವಾಲಯದ ಸುತ್ತಲೂ ಕಣ್ಣಾಡಿಸಿ ನೋಡಿಕೊಂಡು ಬನ್ನಿ ಒಂದು ಸಲ ಶಿವನ ಚರಿತ್ರೆಯ ಫಲಕಗಳನ್ನು ನೀವು ಕಾಣಬಹುದು ಇವೆಲ್ಲವೂ ಮೇಣದಿಂದ ನಿರ್ಮಿಸಲ್ಪಟ್ಟಿವೆ. ನಾನು ಬಾಲ್ಯದಲ್ಲಿ ನೋಡಿದ ಗುಡಿಗೂ ಈಗಿನ ಗುಡಿಗೂ ವ್ಯತ್ಯಾಸವಂತು ಬಹಳಷ್ಟು ಇದ್ದೇ ಇದೆ. ಹೌದು ಬದಲಾವಣೆಗಳು ಆಗಾಗ ನಡೆಯಬೇಕು ಆವಾಗ ನಮ್ಮ ಪುರಾತನ ಗುಡಿ ಗೋಪುರಗಳ ರಕ್ಷಣೆ ಸಾಧ್ಯವೆಂದು ನನ್ನ ಅಭಿಪ್ರಾಯ. 

     ' ಸಾಂದರ್ಭಿಕ ಚಿತ್ರ ' 

ನಿಜವಾದ ಭಕ್ತಿಯಿಂದ ಶಿವನ ಆರಾಧನೆ

ಈ ಶಿವರಾತ್ರಿಯ ದಿನದಂದು ನಾವು ನೀವೆಲ್ಲರೂ ನಿಜವಾದ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ  ನಮ್ಮ ಜೀವನದಲ್ಲಿನ ಕಷ್ಟಗಳು ,ಅಡ್ಡಿ ಆತಂಕಗಳು , ಅಡೆತಡೆಗಳು   ಮತ್ತು ದುಃಖ ದುಮ್ಮಾನಗಳೆಲ್ಲ ದೂರವಾಗಿ ನಮ್ಮ ಮನಸಿಗೆ ನೆಮ್ಮದಿ ಸುಖ ಶಾಂತಿ ಇಷ್ಟಲ್ಲದೆ ಸಮೃದ್ಧಿ ಮತ್ತು ಯಶಸ್ಸು ಖಂಡಿತ ದೊರೆಯುತ್ತದೆ ಎಂದು  ನಂಬಿಕೆ ಇಟ್ಟುಕೊಂಡು ಶಿವನಿಗೆ ಬಿಲ್ವಪತ್ರೆ ಹೂ ಹಣ್ಣು ಸಮರ್ಪಿಸಿ ಬೇಡಿಕೊಳ್ಳೋಣ.

ಲೇಖಕಿ ಪ್ರೇಮಾ ನಡುವಿನಮನಿ


 

' ಶಿವನಿಗೆ ಸಮರ್ಪಿತ ಬೆಳಗಾವಿಯ ಪುರಾತನ ದೇವಾಲಯ ಶ್ರೀ ಕಪಿಲೇಶ್ವರ '  ' ಶಿವನಿಗೆ ಸಮರ್ಪಿತ ಬೆಳಗಾವಿಯ ಪುರಾತನ ದೇವಾಲಯ ಶ್ರೀ ಕಪಿಲೇಶ್ವರ ' Reviewed by ಕನಸು ಕಂಗಳ ಚೆಲುವೆ on February 14, 2026 Rating: 5

No comments:

Contact For Website Designing - Low Rates
Mob: 9448841652
Powered by Blogger.