ಮತ್ತೆ ಬಂತದೋ ಯುಗಾದಿ ನೋಡ.. ಗೆಳತಿ
ಬೆಳಗಿನ ತಂಪಾದ ಸೂಸುವ ತಂಗಾಳಿ, ಬಾಗಿಲಲ್ಲಿ ನಲಿಯುವ ಮಾವಿನ ತೋರಣ, ಅಡುಗೆಮನೆಯಲ್ಲಿ ಹರಡುವ ಹೋಳಿಗೆಯ ಘಮಘಮಸುವ ಸುವಾಸನೆ...ಇಷ್ಟೆಲ್ಲ ವೈಭವ ಇನ್ಯಾವ ದಿನ ಹೇಳಿ ನೋಡೋಣ ಅದೇರಿ ಹೊಸ ವರ್ಷದ ಹೊಸತನ ತರುವ ಯುಗಾದಿ ಹಬ್ಬದ ದಿನ. ಕರ್ನಾಟಕದಲ್ಲಿ ಯುಗಾದಿ ಹಬ್ಬವು ವಿಶೇಷ ಸ್ಥಾನ ಹೊಂದಿದೆ. ಇದು ಕೇವಲ ಹೊಸ ವರ್ಷದ ಪ್ರಾರಂಭವಲ್ಲ, ಹೊಸ ಆಶಯಗಳ ಮತ್ತು ಹೊಸ ಚೈತನ್ಯದ ಸಂಕೇತವಾಗಿದೆ. ಪ್ರಕೃತಿಯಲ್ಲಿಯೂ ಈ ಸಮಯದಲ್ಲಿ ಹೊಸ ಚಿಗುರು, ಹೊಸ ಹೂವುಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಮಾನವರ ಜೀವನದಲ್ಲೂ ಹೊಸ ಆರಂಭಕ್ಕೆ ಯುಗಾದಿ ಪ್ರೇರಣೆ ನೀಡುತ್ತದೆ. ಆದ್ದರಿಂದ ಈ ಹಬ್ಬವನ್ನು ಎಲ್ಲರೂ ಸಂತೋಷದಿಂದ ಸ್ವಾಗತಿಸುತ್ತಾರೆ.
ಬದುಕು ಎಂದ ಮೇಲೆ ಸಿಹಿ ಮತ್ತು ಕಹಿ ಎರಡು ಎಲ್ಲರ ಬಾಳಲ್ಲಿ ಇರುವುದು ಸಹಜವೇ ತಾನೇ ? ನಮ್ಮ ನಿಮ್ಮ ಬದುಕಿನಲ್ಲಿ ಸಿಹಿ ಇದ್ದಾಗ ಹೆಚ್ಚು ಹಿಗ್ಗುವ ನಾವು ಅದೇ ನಮ್ಮ ಬದುಕಿನಲ್ಲಿ ಹಠಾತ್ತನೆ ಕಹಿ ಬಂದಾಗ ಅದರ ನೋವು ಸಹಿಸದೇ ಒದ್ದಾಡುವುದು ಇದೆ. ಆದರೆ ಸಿಹಿ ಕಹಿ ಎರಡೂ ಬಾಳಲ್ಲಿ ಸಮವಾಗಿ ಸ್ವೀಕರಿಸಿ ಬದುಕುವುದೇ ನಮ್ಮ ಜೀವನ ಎನ್ನುವ ಸಂದೇಶ ಹೊತ್ತಿ ಬರುವುದೇ ಈ " ಯುಗಾದಿ ಹಬ್ಬ "
ಯುಗಾದಿ ಹಬ್ಬ ವೆಂದರೆ ಎಲ್ಲರಿಗೂ ನೆನಪಾಗುವುದೇ ಹೊಸತನ , ಹೊಸ ವರ್ಷ ಮತ್ತು ಹೊಸ ಚಿಗುರಿನ ಹಸಿರು ಎಂದು. ನಮ್ಮ ನಾಡಿನ ಹಿರಿಯ ಕವಿ ಬೇಂದ್ರೆ ಅಜ್ಜನ ಸಾಲುಗಳನ್ನು ಈ ಯುಗಾದಿ ಹಬ್ಬದಂದು ಪ್ರತಿಯೊಬ್ಬರೂ ಮೆಲುಕು ಹಾಕಿಯೇ ಹಾಕುತ್ತಾರೆ. ಅಷ್ಟೇ ಅಲ್ಲದೆ ಯುಗಾದಿಯ ದಿನ ಎಲ್ಲರ ಮೊಬೈಲ್ ಗಳಲ್ಲಿ , ಮನೆಯ ದೊಡ್ಡ ಟಿವಿಗಳಲ್ಲಿ ಈ ಹಾಡಂತು ಇಂಪಾಗಿ ಕೇಳಿ ಬರುತ್ತಲೇ ಇರುತ್ತದೆ. ಎಂತಹ ಸಾಲಗಳು ಅವು ಮನಕೆ ಮುದ ನೀಡುತ್ತವೆ...
" ಯುಗ ಯುಗಾದಿ ಕಳೆದರೂ
ಯುಗಾದಿ ಮತ್ತೆ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ..
ಹೊಂಗೆ ಹೂವ ತೊಂಗಲಲಿ
ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗೆಂಪು ಸೂಸಿ
ಜೀವಕಳೆಯ ತರುತಿದೆ....
ಯುಗಾದಿ ಹಬ್ಬವು ಹಿಂದುಗಳ ಪವಿತ್ರ ಹಬ್ಬವಾಗಿದೆ ಮತ್ತು ಇದನ್ನು ಭಾರತದ ಅನೇಕ ಕಡೆಗಳಲ್ಲಿ ಅತ್ಯಂತ ಹರುಷದಿಂದ ಹೊಸ ದಿನದ ಹಬ್ಬವಾಗಿ ಆಚರಿಸುತ್ತಾರೆ .ಯುಗಾದಿ ಎಂಬ ಪದದ ಅರ್ಥವೇ ನಮಗೆ ತಿಳಿಸಿಕೊಡುವುದು ಏನೆಂದರೆ ' ಯುಗ + ಆದಿ ' ಆದಿ ಎಂದರೆ ಆರಂಭ ಅಥವಾ ಪ್ರಾರಂಭವೆಂದು ಅದಕ್ಕೆ 'ಯುಗದ ಆದಿ ' ಅಥವಾ ಯುಗಾದಿ ಎಂದು.
ಆದರೆ ನನಗೆ ಮಾತ್ರ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಪ್ರಕೃತಿಯಲ್ಲಿಯ ಹೊಸ ಚಿಗುರು , ಹೊಸ ಹಣ್ಣು ಕಾಯಿಗಳ ಹೊಸ ಚಿಗುರು , ಮಾವು ಬೇವುಗಳ ಹಸಿರುವರ್ಣದ ನಲಿವು ಅಷ್ಟೇ ಅಲ್ಲ ಹೊಸ ಬಟ್ಟೆಯ ಖುಷಿ ಯುಗಾದಿ ಅಂದರೆ ಮನೆಯಲ್ಲಿ ಹೊಸ ಬಟ್ಟೆಯ ಖರೀದಿ ಆವಾಗಿನ ಕಾಲದಲ್ಲಿ ಈಗೀನ ಹಾಗೆ ಯಾವಾಗ ಅಂದರೆ ಆವಾಗ ಬಟ್ಟೆಗಳನ್ನು ಖರೀದಿಸಿ ಧರಿಸುವ ಪದ್ದತಿ ಇರಲಿಲ್ಲ ಯುಗಾದಿ ದಿನ ಹೊಸ ಬಟ್ಟೆ ಧರಿಸಿ ಹೊರಗಡೆ ಹೋಗಿ ಅಂಗಿಯ ನಿರಿಗೆಗಳನ್ನು ಎರಡೂ ಕೈಯಲ್ಲಿ ಹಿಡಿದು ಎಲ್ಲರಿಗೂ ತೋರಿಸುತ್ತ " ನೋಡು ನನ್ನ ಹೊಸ ಅಂಗಿ " ಅಂತ ಹೇಳಿ ಆಕಡೆ ಈಕಡೆ ಸೊಂಟ ತಿರುಗಿಸಿ ತೋರಿಸಿ ಖಷಿ ಪಡುವುದು ಇದೆಯಲ್ಲ ಅದರ ಖುಷಿಯೇ ಬೇರೆ.
ಇನ್ನೂ ನಮ್ಮಮ್ಮ ಮಾಡುವ ಕಡ್ಲಿಬೇಳೆಯ ಹೂರಣದ ಹೋಳಿಗೆ , (ಒಂದೊಂದು ಸಲ ಬೇಳೆಯ ಕಡುಬು ಮಾಡುವುದುಂಟು) ಮತ್ತು ತುಪ್ಪ ಒಟ್ಟಿನಲ್ಲಿ ಸಿಹಿ ಅಡುಗೆಯ ರುಚಿ ಇಷ್ಟೇ ನನ್ನ ಸ್ಮೃತಿಯ ಪಟಲದಲ್ಲಿ ಉಳಿದಿದೆ. ಹೌದು ಯುಗಾದಿ ಹಬ್ಬ ಬೇವು ಬೆಲ್ಲ ಮಿಶ್ರಿತ ಸಿಹಿ ಪದಾರ್ಥಗಳ ತಯಾರಿಕೆ ನೆನಪಿದೆ ಬೇವಿನ ಹೊಸ ಚಿಗುರಿನ ಎಸಳು ಮತ್ತು ಬೆಲ್ಲ ಮತ್ತೆ ಪುಟಾಣಿ ಸೇರಿಸಿ ಒಳಕಲ್ಲಿಗೆ ಹಾಕಿ ಪುಡಿಯನ್ನು ತಯಾರಿಸಿ ಸಂಜೆಗೆ ಆತ್ಮೀಯರ ಮನೆಗೆ ಹೋಗಿ ಬೇವು ಬೆಲ್ಲ ಮಿಶ್ರಿತ ವಿಶಿಷ್ಠವಾದ ತಿಂಡಿ ಕೊಡುವುದು ಅಥವಾ ಮನೆಗೆ ಬಂದವರಿಗೆ ಒಂದಿಷ್ಟು ತಿನಿಸಿ ನೀರು ಕೊಟ್ಟು ಕುಡಿಸಿ ಬಾಳೆಲ್ಲ ಸಿಹಿಯಾಗಿರಲಿ ಅಂತ ಹೇಳುವ ಪದ್ದತಿಯು ಇದೆ. ಈಗಲೂ ನಮ್ಮ ಮನೆಗಳಲ್ಲಿ ಈ ಸಿಹಿ ಪದಾರ್ಥ ತಯಾರಿಸುತ್ತಾರೆ.
ನಮಗೆಲ್ಲ ತಿಳಿದೇ ಇದೆ ಈ ಹಬ್ಬವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಜನರು ಆಚರಿಸುವರು ಮಹಾರಾಷ್ಟ್ರದ ಜನರು ಇದನ್ನು ಗುಡಿಪಾಡವಾ ಅಥವಾ ಗುಡಿ ಪಾಡ್ಯ ಅಂತ ಕರೆಯುವರು ನನ್ನ ತಂದೆ ಊರು ಬೆಳಗಾವಿಯೇ ಆಗಿರುವುದರಿಂದ ಈ ಯುಗಾದಿ ಹಬ್ಬ ಅತ್ಯಂತ ವಿಶೇಷ ಆಚರಣೆ ಎನಿಸಿದೆ ಯಾಕೆಂದರೆ ಮಹಾರಾಷ್ಟ್ರದ ಪ್ರಭಾವ ಬೆಳಗಾವಿಯ ಮೇಲೆ ಸ್ವಲ್ಪ ಬೀರುತ್ತದೆ ಅವತ್ತಿನ ದಿನ ನನ್ನ ಅಜ್ಜಿ ಮೊದಲೇ ರೈತರ ಮನೇ ಎಲ್ಲಾ ಬಾಗಿಲುಗಳಿಗೆ ಮಾವಿನ ತಳಿರು ತೋರಣಗಳಿಂದ ಸಿಂಗರಿಸಿ , ಸಗಣಿಯಿಂದ ಬಾಗಿಲು ಮುಂದೆ ಗುಡಿಸಿ ಸಾರಿಸಿ ರಂಗೋಲಿ ಹಾಕಿ ಎಲ್ಲಾ ದನದ ಹಕ್ಕಿಯನ್ನು ( ದನದ ಕೊಟ್ಟಿಗೆ ) ನೀರಿನಿಂದ ಸ್ವಚ್ಛ ಮಾಡಿಸಿ ಅಲ್ಲಿಯೂ ಕೂಡ ಮಾವಿನ ತೋರಣವನ್ನು ಕಟ್ಟಿ ಹಬ್ಬ ಆಚರಿಸುವುದನ್ನು ನೋಡಿದ್ದೇನೆ. ಮನೆಯ ಮುಂದಿನ ಸುರಂಗದ ಹೂವಿನ ಗಿಡಗಳ ವೈಭವ , ಮಾವಿನ ಗಿಡಗಳಲ್ಲಿ ಚಿಗುರೊಡೆದ ಆ ಹಸಿರಿನಿಂದ ಕೂಡಿದ ಎಲೆಗಳ ಶೃಂಗಾರ ಮತ್ತು ಆ ಗಿಡದ ಟೊಂಗೆಗಳಲ್ಲಿ ಕುಹೂ ಕುಹೂ ಕೋಗಿಲೆಯ ಇಂಪಾದ ಸಂಗೀತವನ್ನು ಕೇಳುತ್ತಲೇ ನಾನು ಬೆಳೆದು ಬಂದುದು ನೆನಪಿದೆ.
ಇನ್ನೂ ಎಲ್ಲಾ ದೇವಸ್ಥಾನಗಳಲ್ಲಿ ಯುಗಾದಿ ದಿನ ವಿಶೇಷವಾದ ಪೂಜೆಯು ನಡೆಯುವುದು. ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲೆ ಅಲ್ಲದೇ ಹೊರಗಿನ ಹೆಬ್ಬಾಗಿಲ ಮೇಲೆ ಕೂಡಾ ಹಸಿರಿನ ತಳಿರು ತೋರಣಗಳಿಂದ ಅಲಂಕರಿಸ ತೋರಣದ ಮಧ್ಯ ಮಧ್ಯ ಮಾವಿನ ಎಲೆ ಹೂವಿನ ಗೊಂಚಲು ಕಟ್ಟುತ್ತಾರೆ ದೇವರಿಗೆ ಹಾಲು ಅಭಿಷೇಕ ಮಾಡಿ ಹೊಸ ವರ್ಷದ ಹೊಸದಿನದ ಆರಂಭವಾದ ದಿನ ಉತ್ಸಾಹ ದಿಂದ ಆಚರಿಸುವರು.
ಈ ದಿನ ಉತ್ಸಾಹದ ದಿನವಾದರಿಂದ ನನ್ನ ಕವಿತೆಯ ಸಾಲುಗಳು ನೆನಪಿಗೆ ಬಂದು ಮುದ ನೀಡಿದವು.
'' ಮುಂಬಾಗಿಲ ತೆರದ ಕಣ್ಣಿಗೆ ಗುಲ್ ಮೊಹರ್ ಚೆಲುವೆಯ ಸ್ವಾಗತ
ಹಸಿರೆಲೆಗಳ ವೈಯಾರದಿ ನಡುವೆ ನಿಂತಿಹ ಮೊಗದೆ ಬೀಗುತ "
ಈ ಗುಲ್ ಮೊಹರ್ ಹೂಗಳು ಯುಗಾದಿಯ ಮುಂಬರುವ ಸಂಕೇತವೇ ಅದಕ್ಕೆ ಅವು ಅಷ್ಟು ಚೆಂದವಾಗಿ ನಳನಳಿಸಿ ನಗುತ್ತವೆ
ತುಂಬಾ ಸಲ ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಒಳಗೆ ನಾನು ಹಾದು ಹೋಗುವಾಗ ರಸ್ತೆಯ ಎರಡು ಬದಿಗಳಲ್ಲಿ ಇರುವ ಗುಲ್ ಮೊಹರ್ ಗಿಡಗಳು ಹೂವರಳಿಸಿ ಚೆಲುವು ನನ್ನ ಅತ್ಯಂತ ಆಕರ್ಷಿಸುವುದಲ್ಲದೇ ಇನಷ್ಟು ರಂಗೀನ ಪರಿಮಳ ಚೆಲ್ಲಿ ನೋಡುಗರ ಕಣ್ಮನ ಸೆಳೆಯುತ್ತವೆ. ಹಾದುಹೋಗುವ ಹಾದಿಹೋಕರೆಲ್ಲ ಒಂದು ಗಳಿಗೆ ಅಲ್ಲಿ ನಿಂತು ಕಣ್ತುಂಬಿಕೊಂಡು ಹೋಗುವುದನ್ನು ನಾನೇಷ್ಟೋ ಸಲ ಗಮನಿಸಿದ್ದೇನೆ. ಈ ದೃಶ್ಯನೋಡುವ ಕಣ್ಣಿಗೆ ಹಬ್ಬವೇ ಸರಿ....
ಯುಗಾದಿ ದಿನ ಇನ್ನೊಂದು ವಿಶೇಷತೆ ಏನೆಂದರೆ ಅವತ್ತಿನ ಮುಂಜಾನೆ ಬೇಗನೇ ಎದ್ದು ಅಭ್ಯಂಜನ ಸ್ನಾನ ಮಾಡುವುದು ತಲೆಗೆ ಎಣ್ಣೆ ಸೀಗೆ ಕಾಯಿ ಹಾಕಿ ತಲೆ ತೊಳೆದುಕೊಂಡು ಮಂತ್ರಗಳ ಪಠಣ ಮಾಡುತ್ತಲೇ ಮಾವಿನ ಎಲೆಯಿಂದ ಕಳಶದನೀರಿನಿಂದ ಮನೆಯ ಮೂಲೆಮೂಲೆಗಳಲ್ಲಿ ಸಿಂಪಡಿಸುವ ಮೂಲಕ ಮನೆಯ ಶುದ್ಧೀಕರಣ ಮಾಡುವುದು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು ಯಾವುವು ? ಒಟ್ಟಾರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು.
ಒಟ್ಟಾರೆ ಹೇಳುವುದಾದರೆ ನಮ್ಮ ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಈ ಚಂದ್ರಮಾನ ಯುಗಾದಿ ಹೊಸತಾದ ಆರಂಭದ ಹಬ್ಬ...
ಇದರ ಸಂದೇಶ ಹಳೆಯ ಕಹಿ ಕ್ಷಣಗಳೆಲ್ಲ ಅಳಿಸಿ ಜಾರಿದ ಸಿಹಿ ಕ್ಷಣಗಳೆಲ್ಲವೂ ನಮ್ಮ ಜೀವನದಲ್ಲಿ ಮರಳಿ ಪಡೆಯಲಿ ನವವಸಂತವು ಎಲ್ಲರ ಬಾಳಿನಲ್ಲಿ ಬೆಳಕು ಚೆಲ್ಲುವ ಮೂಲಕ ಹೊಸ ಹುರುಪು , ಹೊಸ ಭರವಸೆ , ಹೊಸ ಸಾಧನೆಯ ಕನಸು , ಹೊಸ ಯಶಸ್ಸಿನ ನಂಬಿಕೆ ಎಲ್ಲವನ್ನೂ ಎಲ್ಲರ ಬಾಳಿನಲ್ಲಿ ತುಂಬಿ ಹೊಸ ಜೀವನ ನೀಡಲಿ ಎಂಬ ಆಶಯವನ್ನು ಬಯಸಿ ಎಲ್ಲರಿಗೂ ನವಯುಗಾದಿಯ ಶುಭಾಶಯ ತಿಳಿಸಿ ಶುಭ ಕೋರುವೆನು.
ಕೊನೆಗೆ ಎರಡು ಸಾಲುಗಳನ್ನು ಗುನುಗುನಿಸುವುದನ್ನು ಎಂದೆಂದಿಗೂ ಮರೆಯಲಾರೆ....
" ಮತ್ತೆ ಬಂತದೋ ಯುಗಾದಿ ನೋಡ.. ಗೆಳತಿ
ಮಾವು ಎಲೆಗಳ ತೋರಣ ಕಟ್ಟೋಣ ಬಾರ
ಹಳೆಯ ಹಳತುಗಳೆಲ್ಲ ತಗಾದಿ ಮರೆತುಬಿಡ..
ನವಸಂಭ್ರಮದ ಹೊಸಗಾದಿಯ ಹಾಕೋಣ ಬಾರ
ಮತ್ತೆ ಬಂತದೋ ಯುಗಾದಿ ನೋಡ ಗೆಳತಿ
ಮಾವು ಎಲೆಗಳ ತೋರಣ ಕಟ್ಟೋಣ ಬಾರ...
ಕವಯಿತ್ರಿ
ಪ್ರೇಮಾ ನಡುವಿನಮನಿ
ಧಾರವಾಡ
ಮತ್ತೆ ಬಂತದೋ ಯುಗಾದಿ ನೋಡ.. ಗೆಳತಿ
Reviewed by ಕನಸು ಕಂಗಳ ಚೆಲುವೆ
on
March 19, 2026
Rating:
No comments: