ಗಣರಾಜ್ಯೋತ್ಸವ ಎಂಬ ಸಡಗರ




ನನಗೆ ನನ್ನ ದೇಶದ ಮೇಲೆ ಅತ್ಯಂತ ಗೌರವವಿದೆ. ಚಿಕ್ಕಂದಿನಿಂದಲೂ ಶಾಲಾ ಕಾಲೇಜುಗಳಲ್ಲಿ ಆಚರಿಸುವ ಹಬ್ಬಗಳಲ್ಲಿ ಅಗಷ್ಟ್ ೧೫ ಮತ್ತು ಜನವರಿ ೨೬ ಅಂದರೆ ನನ್ನ ಹೃದಯದಲ್ಲಿ ಎಲ್ಲಿಲ್ಲದ ಅತೀವ ಆನಂದ ಮತ್ತು ಸಂತೋಷ ಕೂಡಾ ಆಗುತ್ತಿತ್ತು.
ಅಂದಿನ ಆ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಜನೆವರಿ ತಿಂಗಳು ಬಂತು ಅಂದರೆ ಗಣರಾಜ್ಯದ ದಿನ ಬರುವುದು ಎಂಬ ಖುಷಿಯಲ್ಲಿ ಸಂತಸದ ಭಾವ ಲಹರಿಯಲ್ಲಿ ತೇಲಾಡುತ್ತಿದ್ದೆ. ಒಹೋ ಯಾಕೆ ಅಂತಿರಾ ? ಕಾರಣವಿಷ್ಟೆ ನನಗೆ ಭಾಷೆಣ ಸ್ಪರ್ಧೆಯಲ್ಲಿ ಭಾಷಣ ಮಾಡುವ ಅವಕಾಶ ಮತ್ತು ಜಯ .ಇನ್ನೂ ಎಲ್ಲಾ ಸಹಪಾಠಿಗಳ ಜೋರಾದ ಚಪ್ಪಾಳೆ ಇವೆಲ್ಲವೂ ನನ್ನನ್ನು ಆಕಾಶದಲ್ಲಿ ರೆಕ್ಕೆ ಕಟ್ಟಿ ಬಿಟ್ಟ ಹಕ್ಕಿಯಂತೆ ಹಾರಾಡುವಂತೆ ಮಾಡುತಿದ್ದವು.
 
ನನಗಿನ್ನೂ ನೆನಪಿವೆ ಆ ಹೈಸ್ಕೂಲ್ ದಿನಗಳು:
ಭಾಷಣದ ಸ್ಪರ್ಧೆಗೆ ಮುಂಚೆ ಆ ಎರಡು ಮೂರು ದಿನಗಳು ಬೆಡ್ ರೂಮ್ ನ ಬಾಗಿಲು ಮುಚ್ಚಿಕೊಂಡು ಭಾಷಣವನ್ನು ಕಂಠಪಾಠ ಮಾಡುತ್ತಿದ್ದದ್ದು ಮತ್ತು ಹಾವಭಾವದೊಂದಿಗೆ  ಅಭ್ಯಾಸಮಾಡುವುದು ಕೂಡಾ. ಎಂತಹ ರೋಮಾಂಚಕ ದಿನಗಳು ಅವು ಕಂಠಪಾಠ ಮಾಡಿದ್ದನ್ನು ಅಜ್ಜನಿಗೆ ಹೇಳುವಾಗ ಒಳಗೆ ಫುಳಕ.ಅವನು ಅದು ಸರಿ ಇಲ್ಲ , ಹೀಗೆ ಹೇಳಬೇಕು ಅನ್ನುತ್ತಾ ನನ್ನ ತಿದ್ದುವುದು .ಹ್ಯೂಂ ಅಜ್ಜನಿಗೆ ದೇಶವೆಂದರೆ ಅಪಾರ ಅಭಿಮಾನ ಯಾಕೆಂದರೆ ಅವನು ತನ್ನ ಹದಿನೆಂಟನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಭಾಗವಹಿಸಿ ಜೈಲು ಸೇರಿ ಹೊರಗೆ ಬಂದವನು ಅದಕ್ಕೆ ಭಾರತಾಂಬೆಯ ಮೇಲೆ ಗೌರವ ಭಾವ  ಅದಕ್ಕೆ ಅಜ್ಜ ನನಗೆ ಪ್ರೇರಣೆಯಾಗಿ ಹಿಂದೆ ನಿಂತು ಭಾಷಣದಲ್ಲಿ ಮೊದಲನೆಯ ಬಹುಮಾನ ಪಡೆಯಲೇಬೇಕೆಂದು ತಿದ್ದಿ ತಿದ್ದಿ ಹುರದುಂಬಿಸುತ್ತಿದ್ದ.ಆವತ್ತಿನ ದಿನಗಳಲ್ಲಿ ನಿಜವಾಗಿಯೂ ನಾನು ಫಸ್ಟ್ ಬಹುಮಾನ ಪಡೆದು ಖುಷಿ ಖುಷಿಯಲ್ಲಿ ಮನೆಗೆ ಬಂದು ಎಲ್ಲರಿಗೂ ಹೇಳಿ ಆನಂದ ಪಡುತ್ತಿದ್ದೆ.
 
ಅಜ್ಜನ ಮುಖದಲ್ಲಿ ತಾನು ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಬಂದಂತೆ ಹರುಷವಿರುತ್ತಿತ್ತು.ಅಂದಿನಿಂದ ಒಳಗೊಳಗೇ ಚಿಗುರೊಡೆದ ದೇಶಾಭಿಮಾನದ ಸಸಿ ಇಂದಿಗೆ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ ನನ್ನ ಮಾನಸದಲ್ಲಿ.
ಈಗಲೂ ನನಗೆ ದೇಶವೆಂದರೆ ಮತ್ತು ದೇಶ ಕಾಯುವ ಸಿಪಾಯಿಗಳೆಂದರೆ ಎಲ್ಲಿಲ್ಲದ ಗೌರವಾದರ ಮತ್ತು ಅಷ್ಟೇ ಅಭಿಮಾನ.
 ಸಿಪಾಯಿಗಳೆಂದರೇ ತಮ್ಮ ಜೀವನ ಮುಡಿಪಾಗಿಟ್ಟು ನಮ್ಮ ಜೀವ ರಕ್ಷಿಸುವ ವೀರರು. ನಮಗೆಲ್ಲಾ ಏನೆಲ್ಲಾ ತ್ಯಾಗ ಮಾಡುವ ಅಂತಹವರಿಗೆ ಗಣರಾಜ್ಯದ ದಿನ ವಿಶೇಷ ಗೌರವವನ್ನು ಸಲ್ಲಿಸುತ್ತದೆ ನಮ್ಮ ಗಣ ಸರ್ಕಾರ ಕೂಡಾ. ಇದು ಹೆಮ್ಮೆಯ ವಿಷಯ. ಅಂದು ನಮ್ಮ ಭಾರತ ಸರ್ಕಾರ ವಿಶೇಷವಾಗಿ ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟು ಬೇರೆಯವರ ಪ್ರಾಣ ಕಾಪಾಡಿದ ನಾಗರಿಕರಿಗೆ, ಸೈನಿಕರಿಗೆ ವೀರ ಚಕ್ರ, ಕೀರ್ತಿ ಚಕ್ರ, ಪದ್ಮಭೂಷಣ, ಪದ್ಮಶ್ರೀ, ಪದ್ಮವಿಭೂಷಣ ಮುಂತಾದ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಅಂತಹ ಸಾಹಸಿಗರಿಗೆ , ವೀರರಿಗೆ ನಾನು ನನ್ನ ತಲೆ ಬಾಗಿಸುತ್ತೇನೆ.
ಆದರೆ ಖೇದವೆಂದರೆ ಇತ್ತೀಚಿನ ದಿನಗಳಲ್ಲಿ ಜಗತ್ತೇ ಬದಲಾಗಿದೆ. ಬದಲಾದ ಜಗತ್ತಿನಲ್ಲಿ ಸಂವಹನ ಸಂಪರ್ಕ ವಿಧಾನಗಳು ಬದಲಾಗುತ್ತಾ ಇವೆ. ತಂತ್ರಜ್ಞಾನ ಹೆಚ್ಚಿ ನಮಗೆ ಊಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬದುಕು ಬದಲಾವಣೆ ಹೊಂದುತ್ತಿದೆ.ಇದರಿಂದ ದೇಶದ ಎಲ್ಲ ಕಡೆ ಎಲ್ಲರಲ್ಲೂ ನೈಜತೆ ಕಳೆದುಕೊಳ್ಳುತ್ತಿದೆ.ಎಲ್ಲೆಲ್ಲಿಯೂ ದೇಶಾಭಿಮಾನದ ಕೊರತೆ ಕಾಣುತ್ತಿದೆ.ಯುವಕರಲ್ಲಿ ಗುರಿಯಿಲ್ಲದ ಜೀವನ ಕಾಣುತ್ತಿದೆ.
ಹೌದು ಇದು ಸತ್ಯ ವಾಗಿದೆ ಅದಕ್ಕಾಗಿಯೇ ಭಾರತವನ್ನು ಪ್ರತಿಬಿಂಬಿಸುವ ನಮ್ಮೆಲ್ಲರ ಮೇಲೆ ಅತಿಯಾದ ಗಹನೀಯ ಇನ್ನೊಂದು ದೊಡ್ಡ ಜವಾಬ್ದಾರಿ ಇದೆ ಅದು ಏನೆಂದರೆ ಹದಿಹರೆಯದವರ ಮನದಲ್ಲಿ ದೇಶಪ್ರೇಮ ಮತ್ತು ದೇಶಾಭಿಮಾನದ ಬೀಜ ಬಿತ್ತುವುದು..ಹಾಗಾದರೆ ಅದನ್ನು ನಾವು ನೀವು ಹೇಗೆ ಮಾಡಲು ಸಾಧ್ಯ ಅಂತ ಯೋಚನೆನಾ ? ಖಂಡಿತ ಸಾಧ್ಯವಿದೆ ಚಿಕ್ಕಂದಿನಿಂದಲೇ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕತೆಗಳನ್ನು ಹೇಳುವುದು, ಗಣರಾಜ್ಯೋತ್ಸವ ದಿನ ಧ್ವಜಾರೋಹಣ ಮಾಡುವ ಸ್ಥಳಕ್ಕೆ ಕರೆದುಕೊಂಡು ಹೋಗುವುದು, ಮಕ್ಕಳಿಗೆ ಗಣರಾಜ್ಯೋತ್ಸವ ದಿನ ಟಿವಿಯಲ್ಲಿ ಪ್ರಸಾರವಾಗುವ ನೇರ ಪ್ರಸಾರ ತೋರಿಸುವುದು ಅಲ್ಲದೇ ದೇಶಪ್ರೇಮಿಯ ಚಲನಚಿತ್ರ ತೋರಿಸುವುದು ಮಾಡಿದರೆ ಖಂಡಿತವಾಗಿ ನಾವು ಅವರಲ್ಲಿ ದೇಶದ ಬಗ್ಗೆ ಗೌರವದ ಬೀಜ ಬಿತ್ತಿದ ಹಾಗಯೇ ಅಂತ ಅರ್ಥ. ಹ್ಯೂಂ ಆವಾಗ ನಾವು ನಮ್ಮ ಕಣ್ಣುಗಳಲ್ಲಿ ನಮ್ಮ ದೇಶದ ಉಜ್ವಲ ಭವಿಷ್ಯದ ಕನಸು ಕಾಣಲು ಸಾಧ್ಯವಾಗುತ್ತದೆ ಎಂದು ನನ್ನ ಅನಿಸಿಕೆ....

ದೇಶದ ಎಲ್ಲಾ ಭಾರತೀಯರಿಗೆ  ಗಣರಾಜ್ಯೋತ್ಸವದ ಶುಭಾಶಯಗಳು

- ಪ್ರೇಮಾ ನಡುವಿನಮನಿ 
ಧಾರವಾಡ
ಗಣರಾಜ್ಯೋತ್ಸವ ಎಂಬ ಸಡಗರ ಗಣರಾಜ್ಯೋತ್ಸವ ಎಂಬ ಸಡಗರ Reviewed by ಕನಸು ಕಂಗಳ ಚೆಲುವೆ on February 11, 2018 Rating: 5

No comments:

Contact For Website Designing - Low Rates
Mob: 9448841652
Powered by Blogger.