ನಿನ್ನೆ
ಮಾವನ ಮಗನ ಮದುವೆ ರಾಮದುರ್ಗದಲ್ಲಿ ಮುಗಿಸಿ ಬೆಳಗಾವಿಗೆ ಮರಳಿ ಬರಲು ಕಾರು ಹತ್ತಿದೇವು.
ಬಹಳದಿನಗಳ ನಂತರ ನಾನು ಆ ರಸ್ತೆಯಲ್ಲಿ ತಿರುಗಾಡುತ್ತಿದ್ದೆನು.ರಸ್ತೆಯ ಅಕ್ಕ ಪಕ್ಕ
ಗಳಲ್ಲಿ ಕಬ್ಬು ಕೊಬ್ಬಿನಿಂತಿರುವುದು, ತೆಂಗಿನ ಮರಗಳ ಸಾಲು , ಎಲ್ಲಿಗೋ ಒಂದೊಂದು
ಹೊಲದಲ್ಲಿ ಕಂಡು ಬರುವ ಮನೆಗಳು ಎಲ್ಲವೂ ನೋಡಲು ಸುಂದರವಾಗಿತ್ತು.ಬಾಲ್ಯದಲ್ಲಿ ಓಡಾಡಿದ
ಪರಿಸರ ಇತ್ತೀಚೆಗೆ ಆಧುನಿಕತೆಯ ಉಡುಪು ಧರಿಸಿತ್ತು ....
ದಾರಿಯಲ್ಲಿ ಸಿಗುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ತೊಗೊಂಡು ಮುಂದೆ ಸಾಗುವುದು ಅಂತ ತೀರ್ಮಾನಿಸಿ ಕಾರು ನಿಲ್ಲಿಸಿದೇವು. ಉತ್ತರ ಕರ್ನಾಟಕದ ಧರ್ಮಸ್ಥಳವೆಂದೇ ಪ್ರಸಿದ್ಧಿ ಹೊಂದಿರುವ ರಾಮದುರ್ಗ ತಾಲ್ಲೂಕಿನ ಗೊಡಚಿ ವೀರಭದ್ರೇಶ್ವರ ದೇವರ ದೇವಸ್ಥಾನ. ಕಲಿಯುಗದಲ್ಲಿ
ನಂಬಿದ ಭಕ್ತರ ಇಷ್ಟಾರ್ಥ ಗಳನ್ನು ಈಡೇರಿಸಬಲ್ಲ ದೈವಾದಿ ಪುರುಷನಾಗಿ ಶ್ರೀ ಕ್ಷೇತ್ರ
ಗೊಡಚಿ ವೀರಭದ್ರೇಶ್ವರ ದೇವರು ಪ್ರಸಿದ್ಧ ಪಡೆದ ಮಂದಿರವಾಗಿದೆ.
ಈ ದೇವಾಲಯ ಒಂದು ಐತಿಹಾಸಿಕ ಹಿನ್ನೆಲೆಯನ್ನು ಕೂಡಾ ಹೊಂದಿರುವವುದಾಗಿದೆ. ಪ್ರಾಚೀನ
ಸಂಸ್ಥಾನಿಕರ ಕಾಲದಲ್ಲಿ ಶ್ರೀ ಕ್ಷೇತ್ರ ರಾಮದುರ್ಗ ತಾಲ್ಲೂಕಿನ ತೊರಗಲ್ಲ ಗ್ರಾಮದ
ಶಿಂಧೆ ಮನೆತನದ ಒಡೆತನಕ್ಕೆ ಸೇರಿತ್ತು ಅಂತ ಐತಿಹಾಸಿಕ ಹಿನ್ನೆಲೆಯಿಂದ ತಿಳಿದು
ಬರುತ್ತದೆ. ಶಿಂಧೆ ಮನೆತನದವರು ಮೂಲತಃ ಮರಾಠಿ ಸಂಸ್ಥಾನಿಕರಿಗೇ ಸೇರಿದವರಾಗಿದ್ದರೂ ಸಹ
ಅವರು ಎಲ್ಲಾ ಧರ್ಮಗಳಿಗೂ ಸಮಾನ ಗೌರವವನ್ನು ನೀಡಿ ಅವುಗಳಿಗೆ ಸಾಮಾನ ಅವಕಾಶಗಳನ್ನು
ಕಲ್ಪಿಸಿತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ಅಂದಿನಿಂದ ಇಂದಿನವರೆಗೂ
ಆರಾಧ್ಯದೈವನಾಗಿ ಪೂಜಿಸಲ್ಪಡುವ ವೀರಭದ್ರ ದೇವರ ಜನಪ್ರಿಯತೆಯೇ ಸಾಕ್ಷಿಯಾಗಿದೆ. ಅದೇ
ರೀತಿ ಇನ್ನೊಂದು ವಿಷಯ ಇಲ್ಲಿ ಹೆಚ್ಚು ಗಮನಿಸಬೇಕಾದುದು ಅಂದರೆ ಈ ಭಾಗದಲ್ಲಿ
ಹೆಚ್ಚುಇರುವ ಲಿಂಗಾಯತರಿಗೆ ಕುಲದೇವತೆಯಾಗಿ ಪೂಜಿಸಲ್ಪಡುವ ವೀರಭದ್ರ ದೇವರ
ಜೀರ್ಣೋದ್ಧಾರ ಮಾಡಿ ಶಿಂಧೆ ಮನೆತನದವರು ಅಂತ ಐತಿಹಾಸಿಕ ಹಿನ್ನೆಲೆಯ ಜನ ಈಗಲೂ
ಹೇಳುತ್ತಾರೆ.
ದೇವಾಲಯ ಅಕ್ಕ ಪಕ್ಕ ಮಕ್ಕಳ ಆಟಿಕೆ ಸಾಮಾನುಗಳ
ಅಂಗಡಿಗಳು ಮಕ್ಕಳ ಮನಮೋಹಿಸುತ್ತವೆ.ರಂಗುರಂಗಿನ ಕಾರುಗಳು , ದೊಡ್ಡ ದೊಡ್ಡ ಬಲೂನ್ ಗಳು
ಈಗಂತೂ ಬಾಹುಬಲಿ ಅನ್ನುವ ಸಿನೆಮಾ ಬಂದು ಹೋಗಿ ಅಲ್ಲಿಯ ಬಿಲ್ಲು ಬಾಣದಂತೆ ಆಕರ್ಷಿಸುವ
ಬಿಲ್ಲು ಬಾಣಗಳು ಕೂಡ ಇನ್ನೂ ಆಕರ್ಷಣೆ ಮಾಡುತ್ತವೆ.ದೇವಸ್ಥಾನದ ಮಗ್ಗುಲುಗಳನ್ನು
ಹೆಣ್ಮಕ್ಕಳು ಬೋರೆ, ಬಾಳೆ ಮತ್ತು ಬಳುವೊಲ ಹಣ್ಣುಗಳನ್ನು ಮಾರಾಟದಲ್ಲಿ ಮಗ್ನರಾಗಿದ್ದರು.
ಅಮ್ಮ ಬಳುವೊಲ ಹಣ್ಣುಗಳನ್ನು ಖರೀದಿಸಿದಳು. ನಾನು ಬೆಂಡು ಬೆತ್ತಾಸ,ಚುರುಮರಿ ಇದೆಲ್ಲದರ
ಮಿಶ್ರಿತ ಪ್ರಸಾದ ಖರೀದಿಸಿದೆ.ತಂಗಿಯ ಮಗನಿಗೆ ಒಂದು ಕಾರು ಕೊಡಿಸಲಾಯಿತು.ಒಂದು ಸುತ್ತು
ಎಲ್ಲಾ ಅಂಗಡಿಗಳಲ್ಲಿ ತಿರುಗಾಡಿ ಆಟಿಕೆ ಸಾಮಾನುಗಳ Bargaining ಮಾಡಿ ತಂಗಿ ಮಗನಿಗೆ
ಬಿಲ್ಲುಬಾಣವನ್ನೂ ತಂದಳು.ಎಲ್ಲಾ ಸಾಮಾನುಗಳನ್ನು ಕಾರಿನ ಡಿಕ್ಕಿ ತುಂಬಿಸಿಕೊಂಡು ಕಾರು
ಬೆಳಗಾವಿ ಹಾದಿ ಹಿಡಿಯಿತು.
ನನ್ನ ಮಗ ಸುಮ್ಮನೇ ಇರದೇ
ಅಮ್ಮನನ್ನು ವೀರಭದ್ರ ದೇವರ ಹುಟ್ಟಿನ ಬಗ್ಗೆ ಕೇಳಿದ ಅದಕ್ಕೆ ಆಕೆ ತನ್ನ ಜ್ಞಾನದ
ಪೀಟಾರೆ ತೆಗೆದು ಪೌರಾಣಿಕ ಹಿನ್ನೆಲೆ ಹೇಳಿದಳು " ದೇವಿ ದ್ರಾಕ್ಷಾಯಿಣಿ ದಕ್ಷ ಯಜ್ಞ
ಮಾಡುವಲ್ಲಿ ಹೋಗಿ ಅವಮಾನಗೊಂಡು ನೊಂದು ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿಷಯ
ಶಿವನಿಗೆ ತಿಳಿದಕೂಡಲೇ ಶಿವನು ತನ್ನ ಹಣೆಯಲ್ಲಿದ್ದ ಬೇವರನ್ನು ತೆಗೆದು ನೆಲಕ್ಕೆ
ಹಾಕಿದಾಗ ವೀರಭದ್ರ ಹುಟ್ಟಿದ " ಅಂತ . ಮುಂದಿನ ಕತೆ ಎಲ್ಲರಿಗೂ ಗೊತ್ತಿರುವುದೇ ಆಗಿದೆ
ವೀರಭದ್ರ ದಕ್ಷರಾಜನ ಜೊತೆ ಯುದ್ಧ ಮಾಡಿದ್ದು ಅಲ್ಲವೇ ?
ಆಗ
ನನಗೂ ಎಲ್ಲೋ ಓದಿದ ನೆನಪಾಯಿತು ಏನೆಂದರೆ ವಿಜಯನಗರ ಕಾಲದಲ್ಲಿಯೂ ವೀರಭದ್ರ ದೇವರನ್ನು
ಯುದ್ಧದ ಆದಿದೇವತೆಯಾಗಿ ಪೂಜಿಸಲಾಗುತ್ತಿತ್ತು ಅನ್ನುವ ವಿಚಾರ . ಈಗಲೂ ನಮಗೆ ನೋಡಲು
ಸಿಗುವುದು ಹಂಪಿಯಲ್ಲಿ.
ಹಂಪೆಯ ಉದ್ದನೆಯ ವೀರಭದ್ರ ಎಂದು ಪ್ರಸಿದ್ದಿ ಪಡೆದ ದೇವಾಲಯ:
ನೀವು ಯಾರಾದರೂ ಹಂಪಿಗೆ ಹೋದರೆ ಖಂಡಿತ ನೋಡಿ ಅಲ್ಲಿಯ ವೀರಭದ್ರ ನನ್ನು.. ಬೆಂಡು ಬೆತ್ತಾಸ ಚುರುಮರಿ ಸವಿಯುತ್ತಾ , ಜೊತೆಗೆ ಹರಟೆ ಹಾಕುತ್ತಾ ಬೆಳಗಾವಿಗೆ ಸೂರ್ಯ ಪಶ್ಚಿಮಕ್ಕೆ ಜಾರುವಾಗ ಬಂದು ಮುಟ್ಟಿದೇವು....
- ಕನಸು ಕಂಗಳ ಚೆಲುವೆ ಪ್ರೇಮಾ...
ಶ್ರೀ ಗೊಡಚಿ ವೀರಭದ್ರೇಶ್ವರ ಜಾತ್ರೆ ಸಂಭ್ರಮ
Reviewed by ಕನಸು ಕಂಗಳ ಚೆಲುವೆ
on
February 11, 2018
Rating:
Reviewed by ಕನಸು ಕಂಗಳ ಚೆಲುವೆ
on
February 11, 2018
Rating:






No comments: