ಆಗಸದ ತುಂಬೆಲ್ಲಾ ಕಪ್ಪನೆಯ ಮೋಡಗಳ ತವಕದ ಓಡಾಟ, ಬಿಟ್ಟು ಬಿಡದೇ ಧೋ....!! ಧೋ......!! ಸುರಿಯುತ್ತಲೇ ಇರುವ ಮಳೆಯ ನಡುವೆಯೇ ನಮ್ಮ ಕಾರು ಕುಮಟಾದ ರಸ್ತೆಯಲ್ಲಿ ಸಾಗಿತ್ತು.
" ರಿಮ್ ಝಿಮ್ ರಿಮ್ ಝಿಮ್,ರುಮ್ ಝುಮ್ ರುಮ್ ಝುಮ್
ಭೀಗಿ ಭೀಗಿ ಋತಮೇ
ತುಮ್ ಹಮ್, ಹಮ್ ತುಮ್ ಚಲತೆ ಹೈಂ ಚಲತೆ ಹೈಂ......
ಹಿಂದಿ ಹಾಡೊಂದು ಕೇಳುತ್ತಲೇ ಹಸುರಿನ ಕಾಡುಗಳ ಮಧ್ಯೆ ನಾವು ಮುಂದೆ ಸಾಗುತ್ತಿದ್ದೆವು.
ಆಕಸ್ಮಿಕವಾಗಿ ನಾನು ನನ್ನ ಮಕ್ಕಳು ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ದರ್ಶನ ಮಾಡುವ ವಿಚಾರ ಮಾಡಿದ ಕೂಡಲೇ ಕಾರು ಹತ್ತಿ ಪಯಣ ಬೆಳೆಸಿದೆವು. *ಯಾಣಕ್ಕೆ ಹೋಗುವ ದಾರಿ* ನಾಮ ಪಾಲಕ ವಿರುವ ತಿರುವು ಕಂಡ ಕೂಡಲೇ " ಮಮ್ಮಿ ಯಾಣಕ್ಕೆ ಹೋಗೋಣವಾ ? " ಪ್ರಶಾಂತ ಕೇಳಿದ ನಾನು" ಹ್ಯೂಂ" ಅಂದದ್ದೇ ತಡ ಕಾರಿನ ಸ್ಟೀರಿಂಗ್ ಸರ್ರನೇ ತಿರುಗಿಸಿದ ಕಾರಿನ ಚಕ್ರಗಳು ಯಾಣದ ಕಡೆ ತಿರುಗಿ ಹೊರಟವು.ಬಹಳಷ್ಟು ಜನರ ಬಾಯಲ್ಲಿ ಕೇಳಿದ ಯಾಣದ ಸಾಹಸದ ಕತೆ ಒಮ್ಮೆ ನೆನಪಿಗೆ ಬಂದು ಮೈ ಝುಮ್ ಎಂದಿತು.
ಅದೆಷ್ಟೋ ವಿಸ್ಮಯವನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡು ಪೋಷಿಸುತ್ತಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಯಾಣವನ್ನು ಒಮ್ಮೆ ನೋಡಬೇಕೆನ್ನುವ ನನ್ನ ಹಂಬಲ ಇಂದು ಕೈಗೂಡ ಹೊಂಟಿತ್ತು.
ನಾವು ಹೊರಟಿದ್ದು ಜೂನ್ ತಿಂಗಳಲ್ಲಿ ಆದ್ದರಿಂದ ಬಿಡದೇ ಸುರಿಯುವ ಮಳೆಯಲ್ಲಿ ಯಾಣದ ದಾರಿ ಮಾತ್ರ ದುರ್ಗಮವಾಗಿದ್ದರೂ ಕಂಗಳಿಗೆ ಹಸಿರಿನ ನೋಟ ಮಾತ್ರ ತಂಪೋ ತಂಪು ನೀಡಿ ಮನಸ್ಸು ಉಲ್ಲಾಸ ತಂದಿತ್ತು.ಹಸಿರಿನಿಂದ ತುಂಬಿದ ಕಾಡಲ್ಲಿ , ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಅಲ್ಲಲ್ಲಿ ಸಣ್ಣಗೆ ಹರಿಯುವ ಝರಿಗಳು, ಪ್ರಕೃತಿ ಸೌಂದರ್ಯದ ಪ್ರಿಯಳಾದ ನನ್ನಂತವಳಿಗೆ ಸ್ವರ್ಗದ ಸಿರಿಯೇ ತಂದು ಮುಂದೆ ನಿಲ್ಲಿಸಿದಂತಾಗಿತ್ತು.
ಇಂತಹ ಹಸಿರಿನ ತಂಪಾದ ವಾತಾವರಣದಲ್ಲಿ ಯಾಣದ ಹಾದಿ ಸುಂದರ ಮತ್ತು ಮನಮೋಹಕ. ಮೇಲೆ ಧೋ..... ಎಂದು ಸುರಿಯುವ ಮಳೆ ಒಂದು ಕಡೆಯಾದರೆ ದಾರಿ ಮುಂದೆ ಸವೆಸಲು ಅಡಚಣೆ ಮಾಡಿತ್ತು ಮುಸುಕು ಹಾಕಿದ ಮಂಜು.
ಹೀಗೆ ಸುಮಾರು ಹದಿನೈದು ಕಿಲೋಮೀಟರ್ ದಾರಿ ಕ್ರಮಿಸಿದ ಮೇಲೆ ಕಾರು ನಿಲ್ಲಿಸಲೇ ಬೇಕು ಏಕೆಂದರೆ ಮುಂದೆ ನಾವು ಹೋಗಬೇಕಾಗಿದ್ದು ಕಾಲ್ನಡಿಗೆಯಲ್ಲಿ ಮಾತ್ರ , ಕಾರು ಒಂದು ಬದಿಗೆ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಸಾಗಿದೆವು. ಮುಗ್ಧ ಹೆಣ್ಣೊಬ್ಬಳನ್ನು ಕಣ್ಣೋಟದಲ್ಲೇ ಸೆಳೆದು ನಗೆ ಬೀರುವ ಪ್ರಿಯನಂತೆ ರಸ್ತೆ ನದಿಯ ಎತ್ತರೆತ್ತರದ ಗಿಡಮರಗಳು ಹಸಿರಿನಿಂದ ಕಂಗೊಳಿಸಿ ನನ್ನ ಸೆಳೆಯತೊಡಗಿದವು. *ಈ ಹಸಿರು ಸಿರಿಯಲಿ ಮನಸ್ಸು ಮೆರೆಯಲಿ* ಎಂಬ ಹಾಡು ಮನ ಗುನಗುನಿಸದೇ ಮಾತ್ರ ಇರಲಿಲ್ಲ. ಎಲ್ಲರ ಬದುಕಲ್ಲಿಯೂ ನೋವು ನಲಿವು ಏರಿಳಿತ ಸಹಜ ಅಲ್ಲವೇ ? ಈ ಎಲ್ಲಾ ಜಂಜಾಟದಿಂದ ಸ್ವಲ್ಪಮಟ್ಟಿಗೆ ಮನಸ್ಸು ರಿಲ್ಯಾಕ್ಸ ಮಾಡಿಕೊಳ್ಳಬೇಕೆಂದರೆ ಒಮ್ಮೆ ಯಾಣದ ಚಾರಣ ಮಾಡಲೇಬೇಕು.
ಹಕ್ಕಿಗಳ ಚಿಲಿಪಿಲಿ ನಾದ ಕಿವಿಗೆ ಇಂಪು , ಮೇಲೆಲ್ಲೋ ಗಿಡದಲ್ಲಿ ಕುಳಿತ ಹಕ್ಕಿಯೊಂದು ಖುಷಿಯ ಸಿಳ್ಳೆ ಹೊಡೆಯತೊಡಗಿತು ಇದನ್ನು ಆಲಿಸಿದ ಮಗ ಪ್ರಶಾಂತ ಉತ್ತರವೆಂಬಂತೆ ತಾನು ಸಿಳ್ಳೆ ಹಾಕಿದ ಅದಕ್ಕೆ ಮತ್ತೆ ತನ್ನನ್ನು ಯಾರೋ ಮಾತಾಡಿಸುತ್ತಿದ್ದಾರೇನೋ ಎಂಬಂತೆ ಆ ಹಕ್ಕಿ ಮತ್ತೊಮ್ಮೆ ಸಿಳ್ಳೆ ಹಾಕಿತು ಹೀಗೆ ಇವರಿಬ್ಬರ ಸ್ನೇಹದಾಟ ನೋಡುತ್ತಲೇ ನಾವಿಬ್ಬರೂ ( ಹಿರಿ ಮಗ ಫ್ರಫುಲ್ ಮತ್ತು ನಾನು) ಭೈರವೇಶ್ವರ ಶಿಖರದೆದುರು ಬಂದು ನಿಂತೆವು.ದೈತ್ಯಾಕಾರದ ಕಡುಕಪ್ಪುಬಣ್ಣದ ಹೆಬ್ಬಂಡೆ....!
ಶಿಖರದ ಎತ್ತರ ನೋಡಿ ನಿಬ್ಬೆರಗಾದೆ..!
ಹ್ಯೂಂ ಈ ಶಿಖರದ ಎತ್ತರ 120 ಮೀಟರ್ ವಂತೆ , ವಿಜ್ಞಾನ ಹೇಳುವಂತೆ ಈ ಶಿಖರಗಳು ಜ್ವಾಲಾಮುಖಿಯಿಂದ ಸಿಡಿದ ಬಂಡೆಗಳಾದರೆ ಪುರಾಣದ ದಂತ ಕತೆ ಯಲ್ಲಿ ಭಸ್ಮಾಸುರನು ಭಸ್ಮವಾದಾಗ ಉದ್ಭವಿಸಿದ ಶಿಖರಗಳಂತೆ , ಅದೇನೇ ಇರಲಿ ಮುಂದೆ ವಿವರಣೆ ನೀಡುವೆ . ಕಪ್ಪು ಶಿಲೆಯ ಬಂಡೆಗೆ ಕಟ್ಟಿದ ಹೆಜ್ಜೇನುಗಳ ಸಾಲುಗಳ ನೋಡಿ ಒಮ್ಮೆ ಮೈ ಝುಮ್ ಅನ್ನದೇ ಇರಲಾರದು..!
ಒಂದು ಸೆಲ್ಫಿ ಫೋಟೋ ಕ್ಲಿಕ್ಕಿಸದೇ ಹೇಗಿರಲಿ ? ಒಂದು ಸೆಲ್ಫಿ ಆಯಿತು ಒಳಗೆ ಭೈರವೇಶ್ವರ ದೇವರ ದರ್ಶನಕ್ಕೆ ಹೋದೆವು.ಬಂಡೆಯಬುಡದಲ್ಲಿ ಎರಡು (2) ಮೀಟರ್ ಎತ್ತರದ ಭೈರವೇಶ್ವರ ದೇವನಿಗೆ ತಲೆ ಬಾಗಿ,ತೀರ್ಥ ಸ್ವೀಕರಿಸಿದಾಗ ಪೂಜಾರಿಯಿಂದ ತಿಳಿದು ಬಂದ ವಿಷಯ ಭೈರವೇಶ್ವರ ಮೂರ್ತಿ ತಾನಾಗಿಯೇ ಉದ್ಭವವಾದದ್ದು ಎಂಬ ಪ್ರತೀತಿ, ಬೃಹತ್ ಬಂಡೆಯ ನಡುವೆ ಜಲಸಂಚಯ ಸದಾ ಒಸರುವುದ ನೋಡಿ ಒಮ್ಮೆ ವಿಸ್ಮಯವಾದರೂ ಸತ್ಯವು ಕೂಡಾ ಸದಾಕಾಲವೂ ಒಸರುವ ನೀರು ವರ್ಷವಿಡೀ ಲಿಂಗದ ಮೇಲೆ ಬೀಳುತ್ತಾ ಶಿವನಿಗೆ ಅಭಿಷೇಕ ಮಾಡುತ್ತದೆ ಎಂಬುದು. ಶಿವರಾತ್ರಿಯ ದಿನ ಇಲ್ಲಿ ಭಕ್ತರ ದಂಡೇ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ ಮತ್ತು ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತೆಗೆದುಕೊಂಡು ಗೋಕರ್ಣದ ಮಹಾಬಲೇಶ್ವರ ದೇವನಿಗೆ ಅರ್ಪಿಸುವುದರಿಂದ ಮಹಾಪುಣ್ಯ ಸಿಗುವುದೆಂಬ ಕತೆ ಕೂಡ ಅಷ್ಟೇ ಪ್ರಚಲಿತದಲ್ಲಿರುವುದು
ಅನುಪಮವಾದ ಬೃಹತ್ ಕಪ್ಪು ಶಿಲಾಶಿಖರದ ಒಳಗಿರುವ ಗುಹೆಯೊಳಗೆ ಹೋಗುವುದೆಂದು ಅಂದಾಗ " ಮಮ್ಮಿ ನಡಿ ಹೋಗೋಣ " ಅಂದರೂ ಒಳಗೆ ಹೋಗುವ ಸಾಹಸ ನಾನಂತೂ ಮಾಡಲಿಲ್ಲ " ನೀವಿಬ್ಬರೇ ಹೋಗಿ " ಅಂದು ಭೈರವೇಶ್ವರ ದೇವಾಲಯದ ಸುತ್ತಲಿನ ಹಿರಿಬಂಡೆಯ ವೀಕ್ಷಣೆಗೆ ಮನ ನಿಂತಿತು.ಫ್ರಫುಲ್, ಪ್ರಶಾಂತ ಗುಹೆಯೊಳಗೆ ಹೋಗಿ ಪರಸ್ಪರ ಹೆಸರನ್ನು ಕೂಗಿ ಕೂಗಿ ತಮ್ಮ ಧ್ವನಿ ಪ್ರತಿಧ್ವನಿಯಾಗುವುದನ್ನು ಕೇಳಿ ಹರುಷಗೊಳ್ಳುತ್ತ ನಗುನಗುತ್ತ ನನ್ನೆಡೆಗೆ ಓಡುತ್ತ ಬಂದು " ಮಮ್ಮಿ ಬಾವಲಿಗಳ ಹಿಂಡೇ ಇದೆ ನೀನು ನೋಡಬೇಕಿತ್ತು " ಎಂದರು.
‘ಸೊಕ್ಕಿದ್ದರೆ ಯಾಣ’ ಎಂಬ ಗಾದೆ ಮಾತು ಸುಳ್ಳಗೈದು ಇಂದು ಯಾಣದ ಪ್ರಯಾಣ ಸುಗಮವಾಗಿದೆ.ಯಾಣದ ಹತ್ತಿರದವರೆಗೂ ಟಾರ್ ರಸ್ತೆ ಸರಳವಾಗಿ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ.
ಕುಮಟಾದಿಂದ ಹರಿಟೆಯ ಬಳಿ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗವಾಗಿಯೇ ನಾವು ಯಾಣಕ್ಕೆ ಪಯಣ ಹೋಗಿದ್ದು. ಇನ್ನೊಂದು ಕಡೆ ಯಾಣ ಬರುವವರಿಗೆ ಶಿರಸಿಯಿಂದ ಹೆಗಡೆಕಟ್ಟೆ ದಾರಿಯಿಂದಲೂ ಇಲ್ಲಿಗೆ ಬರಬಹುದಾಗಿದೆ. ಶಿರಸಿಯಿಂದ ಯಾಣ ಕೇವಲ ನಲವತ್ತೈದು ( 45) ಕಿಲೋಮೀಟರ್ ಮಾತ್ರ , ಪ್ರಕೃತಿಯ ಭವ್ಯತೆಯನ್ನು ನೋಡಿ ಆನಂದಿಸಿ ಖುಷಿ ಅನುಭವಿಸಬೇಕು ಅಲ್ಲವೇ ?
ಭೋರ್ಗರೆಯುವ ಮಳೆಯಲ್ಲಿ ಮನಸೂರೆಗೊಳ್ಳುವ ಸೃಷ್ಟಿಯ ಸೊಬಗು ನೊಂದ ಮನಕ್ಕೆ ಸಾಂತ್ವನ ಹೇಳುವ ರೀತಿ ಬೆಂದ ಭೂವಿಗೆ ತಣಿಸುವ ರೀತಿ ಈ ಮಳೆಯ ಸುರಿಯುವುದು ನೋಡು ಎಂಬ ಕವನದ ಸಾಲುಗಳನ್ನು ಮನ ಗೀಚುವಾಗ ಇತಿಹಾಸದ ಪುಟಗಳು ತೆರೆದುಕೊಂಡವು.
ಇತಿಹಾಸದ ಪ್ರಕಾರ ಸ್ಕಂದ ಪುರಾಣದಲ್ಲಿ ಯಾಣದ ಬಗ್ಗೆ ಉಲ್ಲೇಖ ಹೀಗಿದೆ ಶಿವನಿಂದ ವರ ಪಡೆದ ಭಸ್ಮಾಸುರ ಎಲ್ಲರನ್ನೂ ಭಸ್ಮ ಮಾಡಿ ಕೊನೆಗೆ ಶಿವನನ್ನೇ ಭಸ್ಮ ಮಾಡಲು ಹೊರಟನಂತೆ ಶಿವ ಹೆದರಿ ಈ ಪ್ರದೇಶಕ್ಕೆ ಬಂದು ಯಾಣದ ಶಿಲೆಯೊಳಗೆ ಅವಿತುಕೊಂಡು ಕುಳಿತನಂತೆ ಆವಾಗ ಎಲ್ಲರೂ ವಿಷ್ಣುವಿನ ಮೊರೆ ಹೋದಾಗ ವಿಷ್ಣುವು ಮೋಹಿನಿಯ ಅವತಾರ ಧರಿಸಿ ಭಸ್ಮಾಸುರನನ್ನು ಮಳ್ಳ ಮಾಡಿ ಇಲ್ಲಿಯೇ ಕೊಂದನೆಂಬ ಕತೆಯೂ ಲೋಕ ಪ್ರಿಯವಾಗಿದೆ. ಬಹುಶಃ ಅದಕ್ಕೆ ಇರಬೇಕು ಇಲ್ಲಿನ ಕಪ್ಪು ಬಣ್ಣದ ಶಿಲೆಗಳು ಇರುವುದಕ್ಕೆ ಸಾಕ್ಷಿಯಾಗಿ ಭಸ್ಮವನ್ನು ಹೋಲುವ ಇಲ್ಲಿಯ ಮಣ್ಣು , ಇಲ್ಲಿಯ ಕಲ್ಲು ಎಲ್ಲವನ್ನೂ ನೋಡಿದ ಮೇಲೆ ಭಸ್ಮಾಸುರನ ಈ ಕತೆ ನಿಜವೆನಿಸದೇ ಇರಲಾರದು.
ಯಾಣದ ಬೃಹತ್ ಶಿಖರದ ಎದುರು ನಿಂತು ನೋಡಿದರೆ ಈ ಮೋಹಿನಿ ಶಿಖರವೂ ಕೂಡಾ ಬೃಹದಾಕಾರದ ಗಾತ್ರದಲ್ಲಿ ಕಣ್ಣಿಗೆ ಗೋಚರಿಸುತ್ತದೆ. ಈ ಪ್ರದೇಶದಲ್ಲಿ ಇನ್ನೂ ಅನೇಕ ಹಲವು ಸಣ್ಣ ಸಣ್ಣ ಬಂಡೆಗಳು ಹೀಗೆ ನಮ್ಮ ಮನಸೆಳೆಯುತ್ತವೆ ಅಂತ ಸ್ಥಳಿಯರು ಹೇಳಿದರು.
ನಾವು ಹೋದ ದಿನ (17-6-18 ) ರಂದೇ ಬಿಡದೇ ಸುರಿದ ಮಳೆಗೆ ಅಲ್ಲಲ್ಲಿ ಸಂದಿಗೊಂದಿಯಲ್ಲಿ ರಭಸವಾಗಿ ಹರಿದು ಮಳೆಗೆ ಮಣ್ಣು ಕೊರೆದು ಕೊದ್ದರಿಸಿ ಬಿದ್ದಿತ್ತು. ಕೆಳಗೆ ಗುಹೆಗೆ ಹೋಗುವ ಮೆಟ್ಟಿಲುಗಳ ಸಮೀಪವೇ ಮಣ್ಣು ಕೊಸರಿ ಬಿದ್ದಿದ್ದು ನೋಡಿ ನಾನು ಸ್ವಲ್ಪ ಹೆದರಿದೆ ಕೆಳಗೆ ಇಳಿಯಲು " ಇದೇ ಗುಹೆಯಲ್ಲಿ ಚಂಡಿಕಾದೇವಿ ಇದೆ ಮಾ ನಡೆ ಅಂತ ಮಕ್ಕಳು ಹೇಳಿದರು ನಾನು ರಿಸ್ಕ್ ತೊಗೊಳ್ಳಲು ರೆಡಿ ಇರಲಿಲ್ಲ " ಹ್ಯೂಂ ಹೂ" ಅಲ್ಲೇ ಮೇಲೆ ಕುಳಿತು ಬರುಹೋಗುವವರ ಹತ್ತಿರ ಮಾಹಿತಿ ಕೇಳಿದೆ ಅವರ ಪ್ರಕಾರ ಬಂಡೆಯ ನಡುವೆ ಇರುವ ಶಿವಲಿಂಗದ ಮೇಲೆ ಸದಾ ಸುರಿಯುವ ನೀರು ಹರಿದು ಚಂಡಿ ಹೊಳೆಯಾಗಿ ಮುಂದೆ ಸಾಗಿ ಹರಿದು ಉಪ್ಪಿನಪಟ್ಟಣದ ಅಘನಾಶಿನಿ ನದಿಯನ್ನು ಕೂಡಿಕೊಳ್ಳುತ್ತದೆ. ಈ ಬಂಡೆಯಿರುವ ಕೆಳಗಡೆ ಹೋಗಿ ನದಿಯಲ್ಲಿ ಸ್ನಾನ ಮಾಡಿ ಬರುವವರಿಗೆ ಸುಮಾರು 90 ಮೀಟರ್ ಎತ್ತರದ ಮೋಹಿನಿ ಶಿಖರ ಕಣ್ಣಿಗೆ ಹಬ್ಬ ನೀಡಿ ಸೆಳೆಯುವುದು ಮಾತ್ರ ಗ್ಯಾರಂಟಿ...! ಇದನ್ನೇ *ಹೊಲತಿ ಶಿಖರಿ* ಎನ್ನುವುದು ರೂಢಿಯಾಗಿದೆ.
ನಾವು ಯಾಣಕ್ಕೆ ಹೋಗುವ ನಿರ್ಧಾರ ಮಾಡಿದ್ದು ಆಕಸ್ಮಿಕವಾಗಿದ್ದರೂ ಸಂತಸದ ಪಿಟಾರೆ ತುಂಬಿಸಿಕೊಂಡು, ಅನುಭವ ಕ್ಷಣಗಳನ್ನು ನೆನಪಿನ ಖಜಾನೆಯಲ್ಲಿ ಭದ್ರವಾಗಿ ಇಟ್ಟು ಸಂಜೆ ಸೂರ್ಯ ಪಶ್ಚಿಮಕ್ಕೆ ಹಿಂತಿರುಗಿ ಹೋಗುವಾಗ ನಾವೂ ಹೊರಡಲು ಅಣಿಯಾದೆವು.
ಈ ಯಾಣಕ್ಕೆ ಭೇಟಿಕೊಡುವವರಿಗೆ ಸೆಪ್ಟೆಂಬರ್ ನಿಂದ ಫೆಬ್ರವರಿಯಲ್ಲಿ ಯೋಗ್ಯವಾದದ್ದು ಅಂತ ಮಳೆಗಾಲದಲ್ಲಿ ಪಯಣಿಸಿದ ನನಗೆ ಖಂಡಿತವಾಗಿ ಅನಿಸಿತು. ಯಾಕೆ ಅಂದ್ರಾ ? ಮಳೆಗೆ ಭೂಮಿಯೆಲ್ಲಾ ಜಾರಿಕೆಯಾಗಿ ನನ್ನ ಕಾಲುಗಳು ಜಾರುತ್ತಿದ್ದಾಗ " ಸಾವಕಾಶವಾಗಿ ಬಾ ಮಮ್ಮಿ " ಅಂತ ಪ್ರಶಾಂತ ನನ್ನ ಕೈ ಹಿಡಿದೇ ಜೊತೆಯಲ್ಲಿ ನಡೆದು ಬರುವಾಗ ನನಗನಿಸಿದ್ದು ಮಳೆಗಾಲದಲ್ಲಿ ಯಾಣದ ಪಯಣ ತುಂಬಾ ಅಪಾಯಕಾರಿ ಅಂತ .
ಮಳೆಯಲ್ಲಿ ನೆನೆಯಲು ಖುಷಿ ಎನಿಸುತ್ತದೆ ನಿಜ ಆದರೆ ಈ ರೀತಿಯ ಪ್ರಯಾಣ ಮಾಡದಿರುವುದೇ ಒಳಿತೆನಿಸಿತು.
ಎರಡೂ ಕಪ್ಪು ಬಣ್ಣದ ಬೃಹತ್ ಶಿಖರಗಳ ಸೌಂದರ್ಯ ಸವಿದು , ಪ್ರಕೃತಿಯ ಮಹಾನ್ ಕೃತಿಗೆ , ಸೃಷ್ಟಿಯ ಸೊಬಗಿನ ಕಲೆಗೆ ತಲೆ ಬಾಗಿ ನಮಿಸಿ ಮತ್ತೆ ಕಾರನ್ನೇರಿ ಕುಳಿತೆವು. ಕಾರು ಎತ್ತರೆತ್ತರ ಗಿಡಮರಗಳ ಮಧ್ಯೆ ದಟ್ಟ ವಿಸ್ತಾರವಾದ ಕಾಡಿನಲ್ಲಿ , ಮಂಜು ಮುಸುಕಿನ ಹಾದಿಯಲ್ಲಿ ಮನವೆಲ್ಲ ತಣಿಸಿಕೊಂಡು ಬಂದ ದಾರಿಯಲ್ಲೇ ಹಿಂತಿರುಗಿ ಓಡತೊಡಗಿತು.....
– ಪ್ರೇಮಾ ನಡುವಿನಮನಿ, ಲೇಖಕಿ, ಧಾರವಾಡ
ಮಳೆಯಲ್ಲಿ ಯಾಣದ ಪಯಣದ ಜತೆಯಲ್ಲಿ....
Reviewed by ಕನಸು ಕಂಗಳ ಚೆಲುವೆ
on
June 28, 2018
Rating:
Reviewed by ಕನಸು ಕಂಗಳ ಚೆಲುವೆ
on
June 28, 2018
Rating:







No comments: