ಹುಲಿಯ ಬಾಯೊಳಗೆ ಸಿಕ್ಕವಳು
ಮಲ್ಲಿಗೆಯ ಹೂ ಮುಡಿದವಳು
ಎದೆಯೊಳಗೆ ಹೊಂಗನಸು ತುಂಬಿ
ಹೊಸ್ತಿಲ ದಾಟಿ ಒಳ ಹೋದಳು......
ಕುಡಿ ನೋಟದಿ ಕಣ್ಣು ಮಿಟುಕಿಸಿದವಳು
ಅವನೆದೆಯೊಳಗೆ ಪ್ರೇಮ ತುಂಬಿ
ಚೊಚ್ಚಿಲ ಬಸುರಿಯ ಕನಸಕಂಡವಳು........
ಮೊದಲರಾತ್ರಿಯ ಹೂಮಂಚದಲಿ ಮಲ್ಲಿಗೆಯಂತವಳು
ಹೆಣ್ತನದ ಸೊಗಸು ತುಂಬಿ
ಪುರುಷತ್ವಕೆ ಸಾಕ್ಷಿಯಾಗಿ ಸೊರಗಿದವಳು........
ಸೀರೆಯ ನಿರಿಗೆ ಸರಿಸುತ ಬಂದವಳು
ಸೆರಗಿನೊಳಗೆ ಭಾವಗಳ ತುಂಬಿ
ಗಂಡನ ಕಣ್ಣೊಳಗೆ ಕಣ್ಣಿಟ್ಟಳು.......
ಹಸಿದ ಹೆಬ್ಬುಲಿಯಂತವನ ಕಂಡು ಹೆದರಿದವಳು
ಅವನ ರಭಸದೆಳೆತಕೆ ಕಣ್ಣ ತುಂಬಿ
ಓಡಿ ಗೂಡೊಳಗೆ ಬಚ್ಚಿಟ್ಟುಕೊಂಡವಳು.......
ವಿಕೃತ ದೇಹದಾಹದ ಒರಟು ಸ್ಪರ್ಶಕ್ಕೆ ನಲುಗಿದವಳು
ಮುರಿದ ಕನಸುಗಳಿಗೆ ಬೆನ್ನುಮಾಡಿ, ಕಣ್ಣೀರು ನಂಬಿ
ಹೆತ್ತವರ ಮಡಿಲ ಸೇರಬೇಕೆಂದಳು......
ಪುರುಷನೆಂಬ ಅಹಂ ಕೆ ಚೀರಿ ಬಳಲಿದವಳು
ಜಗದಿ ಗೆದ್ದೆನೆಂಬ ಬೀಗುವವನ ನಂಬಿ
ದಿನವೂ ತೆಕ್ಕೆಯೊಳಗೆ ಸೋತು ಕರಗುತಿಹಳು...
ಪ್ರತಿದಿನದ ಅತ್ಯಾಚಾರವ ಹೇಳಬೇಕೆಂದಳು
ಹೇಳುವುದು ಯಾರಿಗೆ ? ಹೆತ್ತವರ ಕನಸ ನಂಬಿ
ಕೊರಳ ಕೊಟ್ಟ ಗಳಿಗೆ ನೆನೆದು ಅಳುತಿಹಳು......
ಹುಲಿಯ ಬಾಯೊಳಗೆ ಸಿಕ್ಕ ಜಿಂಕೆಯಂತವಳು
ಪುರುಷ ಸಮಾಜದೆದುರು ಹೃದಯ ಬಿಂಬಿ
ಕಾಪಾಡಿರೆಂದು ಗೋಗರಿದು ಶೋಕಿಸುತಿಹಳು.....
ಹೆಣ್ಣೆಂದರೆನೆಂದು ತಿಳಿಯುವ ಮೊದಲೇ ಬಸುರಾದವಳು
ಮಡಿಲೊಳಗಿರುವ ಹೊಸಚಿಗುರು ನಂಬಿ
ಏನಾದರಾಗಲಿ ಬಾಳಬೇಕೆಂದು ಬದುಕು ಕಟ್ಟಿಕೊಂಡವಳು......
- ಕನಸು ಕಂಗಳ ಚೆಲುವೆ
ಹುಲಿಯ ಬಾಯೊಳಗೆ ಸಿಕ್ಕವಳು
Reviewed by ಕನಸು ಕಂಗಳ ಚೆಲುವೆ
on
November 07, 2017
Rating:
Reviewed by ಕನಸು ಕಂಗಳ ಚೆಲುವೆ
on
November 07, 2017
Rating:

No comments: