ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ



ನಿನ್ನೆ ನಾನು ಧಾರವಾಡ ರಂಗಾಯಣ ಪ್ರಸ್ತುತ ಪಡಿಸಿದ " ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ " ಬಯಲು ರಂಗಭೂಮಿಯಲ್ಲಿ ಮನಸಿಟ್ಟು  ವೀಕ್ಷಿಸಿದೆ.
ರಂಗದ ಮೇಲೆ ಅಭಿನಯಿಸಿದ ಎಲ್ಲಾ ಪಾತ್ರಗಳು ನನ್ನ ಹೃದಯ ರಂಗದ ಮೇಲೆ ಜೀವಂತವಾಗಿ ಅಭಿನಯಿಸಿದಂತೆ ಭಾಸವಾಯಿತು... ಮನ ಬಾಲ್ಯದ ದಿನಗಳನ್ನು ನೆನಪಿಸಿತು.ಆವಾಗ ಬ್ಲ್ಯಾಕ್ ಆ್ಯಂಡ್ ವೈಟ್‌ ಸ್ಕ್ರೀನ್ ಮೇಲೆ ದೂರದರ್ಶನ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಮೆಗಾ ಸೀರಿಯಲ್ ಅಂತ ಅಂದರೆ ರಾಮಾನಂದ ಸಾಗರ ನಿರ್ದೇಶನದ "ರಾಮಾಯಣ" ಮತ್ತದು ಅತ್ಯಂತ ಜನಪ್ರಿಯ ಕೂಡಾ ಆಗಿತ್ತು.
ನಾನು ಅತ್ಯಂತ ಇಷ್ಟಪಡುವ ಎರಡು ಮಹಾಕಾವ್ಯಗಳೆಂದರೆ ' ರಾಮಾಯಣ' ಮತ್ತು' ಮಹಾಭಾರತ'. ನನ್ನ ಮನದಲ್ಲಿ ಅಷ್ಟೊಂದು ಪ್ರಭಾವ ಬೀರಿರುವ ಮಹಾನ್ ಗ್ರಂಥಗಳು ಕೂಡಾ..
ನನಗಿನ್ನೂ ನೆನಪಿದೆ ಅಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿ ನೋಡಲು ಊರಿನ ಗ್ರಾಮೀಣ ಜನರು ನಮ್ಮನೆಗೆ ಬಂದು ಕುಳಿತುಕೊಳ್ಳುತ್ತಿದ್ದುದ್ದು ಇನ್ನೂ ಮಾಸಿಲ್ಲ ಎದೆಯಿಂದ.ವಾರಕ್ಕೆ ಒಂದೇ ಸಲ ಪ್ರಸಾರವಾಗುವ  ರಾಮಾಯಣ ಸೀರಿಯಲ್ ನೋಡಲು ಎಷ್ಟೊಂದು ಕ್ಯೂರಾಸಿಟಿ ಇರುತ್ತಿತ್ತು ಅಂತಿರಾ ! ಮನೆ ಫುಲ್ ಹೌಸಫುಲ್ ಆಗುತ್ತಿತ್ತು.
ಕೆಲವೇ ಕೆಲವರ ಮನೆಯಲ್ಲಿ ಮಾತ್ರ ಆವಾಗ ಅದು ಕಪ್ಪು ಬಿಳುಪಿನ ಟಿ.ವಿ ಇರುತ್ತಿತ್ತು. ಅಪ್ಪ ಅಲ್ಲಿ ಡಾಕ್ಟರ್ , ಹೃದಯವಂತ ಎಲ್ಲರಿಗೂ ಬಾ ಅನ್ನುತ್ತಿದ್ (ದ.ಆ ಹಳ್ಳಿ ಇಂದಿನ ನನ್ನ ಗಂಡನ ಮನೆಯೂ ಆಗಿದೆ ) ಎಂತಹ ಮುಗ್ಧ ಮನಸಿನ ಊರ ಜನಗಳು ಅಂತಿರಾ ಸೀರಿಯಲ್ ನಲ್ಲಿ ರಾಮ ಕಾಡಿಗೆ ಹೊಂಟಾಗ, ಸೀತೆಯನ್ನು ಅಪಹರಿಸಿ ರಾವಣ ಗಹಗಹಿಸಿ ನಕ್ಕಾಗ ಪಾತ್ರದಾರಿಗಳ ಜೊತೆಗೆ ತಾವು ಕಣ್ಣೀರಿಟ್ಟವರು ಅವರು. ಆ ಪಾತ್ರಗಳಲ್ಲಿ ತಮ್ಮನ್ನು ಕಳೆದುಕೊಂಡ ಜನರು.
ನನಗೂ ಆ ಅನುಭವ ಇದೆ ರಾಮಾಯಣದ ಪಾತ್ರಗಳು ಇಂದಿಗೂ ನನ್ನ ಮನಪಟಲದಲ್ಲಿ ಉಳಿದುಕೊಂಡಿವೆ. ಆ ಪುರುಷೋತ್ತಮ ರಾಮ ,ಸೀತೆ ಮತ್ತು ಲಕ್ಷ್ಮಣ ಹಾಗೆಯೇ ಅವರೆಲ್ಲರನ್ನು ನದಿ ದಾಟಿಸಿದ ಆ ನಾವಿಕ ಪಾತ್ರಗಳು ನನ್ನನ್ನು ಈಗಲೂ ಕಾಡುತ್ತವೆ.

ಮುಂದೆ ನನ್ನ ಮದುವೆಯಾಗಿ ಮತ್ತೆ ನಾನು ನನ್ನ ವಿದ್ಯಾಭ್ಯಾಸ ಮುಂದುವರಿಸಿದಾಗ , ಬಿ.ಎ.  ಮತ್ತು ಬಿ.ಎಡ್ ನಲ್ಲಿ ಒಂದಿಲ್ಲೊಂದು ರಾಮಾಯಣದ ಕವಿತೆ ಓದುವ ಸೌಭಾಗ್ಯ ಸಿಕ್ಕಿತು. ( ನಾನು ಓದಿದ್ದು ಹಿಂದಿ ಸಾಹಿತ್ಯ) ಹಿಂದಿ ಸಾಹಿತ್ಯದ ರಾಷ್ಟ್ರಕವಿಯೆನಿಸಿದ ಕವಿ ಮೈಥಿಲಿ ಶರಣ್ ಗುಪ್ತರ ' ಸಾಕೇತ ' ಮಹಾಕಾವ್ಯ ಓದಿದೆ. ಹಾಗೆಯೇ ರಾಮನು ಒಬ್ಬ ಸಾಮಾನ್ಯ ಮಾನವನಂತೆ ಸೀತೆಗಾಗಿ ಚಡಪಡಿಸಿ ಯಜ್ಞ ಮಾಡುವ ಕವಿತೆ ದಿನಕರ್ ಅವರು ಬರೆದದ್ದು ಇನ್ನೂ ಅಚ್ಚಳಿಯದೆ ಉಳಿದಿದೆ.
ಮತ್ತೆ ನಾನು ಎಂ.ಎ. ವ್ಯಾಸಂಗ ಮಾಡುವಾಗ ಒಂದು ವಿಷಯವಾಗಿ ಸಂತ ತುಳಸಿದಾಸರನ್ನೇ ಓದಿದೆ.ಅವರು ಬರೆದ ಅತ್ಯಂತ ಲೋಕಪ್ರಿಯ ಮಹಾಕಾವ್ಯ " ಶ್ರೀ ರಾಮ ಚರಿತ ಮಾನಸ " ಅದ್ಯಯನ ಮಾಡುವ ಅವಕಾಶ ದೊರೆತಿತು ಅತ್ಯಂತ  ಶೃದ್ಧೆಯಿಂದ  ಅದ್ಯಯನ ಮಾಡಿದೆ.ಹೃದಯದಲ್ಲಿ ಮೊದಲೇ ಸ್ಥಾನ ಪಡೆದಿದ್ದ ಶ್ರೀ ರಾಮ,ಸೀತಾ, ಲಕ್ಷ್ಮಣ ಪಾತ್ರಗಳು ಇನ್ನಷ್ಟು ಗೂಡು ಕಟ್ಟಿ ನೆಲೆನಿಂತವು.... ನನ್ನೊಳಗೆ ನನ್ನೊಂದಿಗೆ ಬೆರೆತು ಹೋದ ರಾಮಾಯಣದ ಪಾತ್ರಗಳನ್ನು ಮತ್ತೊಂದು ಸಲ ನಿನ್ನೆ ನೋಡುವ ಅವಕಾಶ  ರಂಗಾಯಣ ಧಾರವಾಡ ಮಾಡಿಕೊಟ್ಟಿತು. ಸಂಗೀತ ಪ್ರಧಾನವಾದ  ಮತ್ತು ಡಾ.ಪ್ರಕಾಶ ಗರುಡ  ಇತ್ತೀಚೆಗೆ ಮರು ನಿರ್ದೇಶನ ಮಾಡಿದ ನಾಟಕ " ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ " ನಿನ್ನೆ ನೋಡಿದಾಗ ಹೃದಯ ಆಹ್ಲಾದಕರವಾದ ಸೌಖ್ಯ ಅನುಭವಿಸಿ ತೇಲಾಡಿತು. ಮನವರಳಿ ಗಾಳಿಯ ಜೊತೆಗೆ ನಾನು ಪಯಣಿಸುವ ರೀತಿ ಅನುಭೂತಿಯಾಯಿತು.

ಅದ್ಭುತವೆನಿಸುವಂತೆ ಡಾ.ಪ್ರಕಾಶ ಗರುಡರು ಈ ನಾಟಕವನ್ನು ಮತ್ತೆ ಮರು ಸೃಷ್ಠಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಇಂದಿನ ದಿನಗಳಲ್ಲಿ ರಂಗಭೂಮಿಯಲ್ಲಿ ಹೊಸ ಇತಿಹಾಸವನ್ನೇ ಬರೆದಿರುವರೇನೋ ಅನ್ನುವಷ್ಟು ವಿಶಿಷ್ಟವಾಗಿ ರಂಗದ ಮೇಲೆ ತಂದಿದ್ದಾರೆ. ಡಾ. ಪ್ರಕಾಶ ಗರುಡರ ಗರಡಿಯಲ್ಲಿ ತರಬೇತಿಯನ್ನು ಪಡೆದ ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಅವರ ಪರಿಶ್ರಮಕ್ಕೆ ತಕ್ಕಂತೆ ನ್ಯಾಯ ಒದಗಿಸಿದ್ದಾರೆ.
ಒಂದೊಂದು ಪಾತ್ರವೂ ಅಭಿನಯಿಸುವಾಗ ನಿಜವಾಗಿಯೂ ನಾವು ರಾಮಾಯಣದ ಕಾಲಾವಧಿಗೆ ಮತ್ತೆ ಹಿಂದೆ ಸರಿದಿದ್ದೆವೆವೆಯೋ ಏನೋ ಅನ್ನುವಷ್ಟು ತನ್ಮಯತೆಯಲ್ಲಿ ಕಳೆದು ಹೋಗುವಂತಹ ಅತ್ಯಂತ ಸುಂದರವಾದ, ಮನೋಜ್ಞ ವಾದ ಅಭಿನಯ ನೀಡಿದರು ಕಲಾವಿದರು. ದಶರಥನಲ್ಲಿ  ಕೈಕಯಿಯೂ ಭರತನಿಗೆ ಜ್ಯವಾಗಬೇಕೆನ್ನುವ ಮತ್ತು ಶ್ರೀ ರಾಮನು ವನವಾಸಕ್ಕೆ ಹೋಗಬೇಕುನ್ನುವ  ಧೋರಣೆ ತೋರಿದಾಗ ದಶರಥ ಪ್ರಲಾಪಿಸುವ ದೃಶ್ಯ  ಮನ ಸೆಳೆಯಿತು, ಭರತನಿಗೆ ತಾಯಿಯ ಮನೋಭಿಲಾಷೆ ತಿಳಿದಾಗ ರಾಮನ ಮೇಲಿರುವ ಅವನ ಪ್ರೀತಿ ಪ್ರೇಮ ಗೌರವವನ್ನು ತೋರಿಸುವಲ್ಲಿ ಭರತನ ಪಾತ್ರದಾರಿ ಪ್ರೇಕ್ಷಕರ ಮನ ಕೊಳ್ಳೆಹೊಡೆಯುತ್ತಾನೆ.
ಈ ನಾಟಕದಲ್ಲಿ ನಡುನಡುವೆ ಬಂದು ಹೋಗುವೆ ತಿಳಿಹಾಸ್ಯ ಎಲ್ಲರನ್ನು ನಗಿಸುವುದು. ಆ ಪೋಷಕ ಪಾತ್ರಗಳು ನಮ್ಮ ಮನದಲ್ಲಿ ಉಳಿದುಕೊಳ್ಳುತ್ತವೆ. ಈ ನಾಟಕದಲ್ಲಿ 'ಸಾಕೇತಪೂರ' ಎಂದು ಬಹಳಷ್ಟು ಬಾರಿ  ಪಾತ್ರಗಳು ಹೇಳುವುದು ಅಥವಾ ಉಚ್ಚರಿಸುವುದು ನನ್ನ ಮನ ಪುಳುಕಿತಮಾಡಿತ್ತು. ಯಾಕೆಂದರೆ ಹಿಂದಿ ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತರ 'ಸಾಕೇತ ' ಮಹಾಕಾವ್ಯ ಅಷ್ಟೊಂದು ನನ್ನ ಮನಸ್ಸಿನ ಪುಟಗಳಲ್ಲಿ ಮನೆ ಮಾಡಿ ಕುಳಿತು ಪ್ರಭಾವ ಬೀರಿದೆ.
ಪೌರಾಣಿಕ ಕಥೆ ರಾಮಾಯಣದ ಕಥಾ ವಸ್ತುವಿಗೆ purely ನಾಟಕದ ಸ್ವರೂಪ ನೀಡಿದ್ದು ನಿರ್ದೇಶಕರ ಪುಣತೆಯನ್ನು ಎದ್ದು ತೋರಿಸುತ್ತದೆ. ಪೌರಾಣಿಕ ನಾಟಕಗಳನ್ನು ರಂಗದ ಮೇಲೆ ತರುವುದು ಸುಲಭ ಅಲ್ಲ ಅಲ್ಲಿ ಹಗಲಿರುಳು ಕಲಾವಿದರಿಗೆ ಸಾಕಷ್ಟು ತಾಲೀಮು ನೀಡಲಾಗಿದೆ. ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರಿಗೆ ಸ್ವರ,ರಾಗ,ಲಯ,ತಾಳದ ಜೊತೆಗೆ ನಿರಂತರ ಅಭ್ಯಾಸ ಮಾಡಿಸಲಾಗಿದೆ ಅನ್ನುವುದು ಕಂಡುಬರುತ್ತದೆ.

ನಿರಂತರ ಅಭ್ಯಾಸ ಮಾಡಿದರೆ ಏನನ್ನಾದರೂ ಕಲಿಯಬಹುದು ಮತ್ತು ಸಾಧಿಸಬಹುದು ಎಂಬ ಮಾತಿನಂತೆ ಹೊಸ ತಲೆಮಾರಿನ ಯುವ ರಂಗ ಕಲಾವಿದರು  ಹೊಸದನ್ನು ಬರೆದಿದ್ದಾರೆ. ಮತ್ತೆ ಮತ್ತೆ ಹೇಗೆ ಮರೆಯಲು ಸಾಧ್ ?  ಮರು ನಾಟ್ಯ ಸಂಗೀತ ಸಂಯೋಜನೆ ಮಾಡಿದ ಯುವಕ ರಾಘವನೆಂಬ ಹೊಸ ತಲೆಮಾರಿನ ಸಂಗೀತ ನಿರ್ದೇಶಕ ಮತ್ತು  ಗಾಯಕನನ್ನು ಸ್ನೇಹಿತರೇ.....
ಮತ್ತು ಅವರ ಪರಿಶ್ರಮ ಫಲಿಸಿದೆ.ರಂಗದ ಮೇಲೆ ಎಲ್ಲ ಕಲಾವಿದರು ಶಾಶ್ತ್ರೀಯ ಸಂಗೀತವನ್ನು ಈ ನಾಟಕದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದದ್ದು ನಿಜಕ್ಕೂ ಬಹಳ ಶ್ಲಾಘನೀಯ. ಎಲ್ಲರ ನಟನೆ, ಹಾಡು ಮತ್ತು ಪ್ರಸ್ತುತ ಪಡಿಸಿದ ರೀತಿ ಎಲ್ಲವೂ ಮೆಚ್ಚುಗೆ ಪಡುವಂತಹವು.
ಹಾಂ ಇನ್ನೊಂದು ವಿಷಯ ಅಂದರೆ ಇಷ್ಟು ಯಶಸ್ವಿ ನಾಟಕ ಪ್ರಸ್ತುತ ಪಡಿಸಲು ಸುಂದರವಾದ ಬಣ್ಣ ಬಣ್ಣದ ರಂಗೀನ ಪರದೆಗಳು ಕಾರಣವಾದವು ಅವುಗಳನ್ನು ಬಾಲಚಂದ್ರ ಹೊಸಮನಿ ( ಗೋಕಾಕ ಕಂಪನಿ) ರಂಗಕ್ಕಾಗಿಯೇ ಸಜ್ಜುಗೊಳಿಸಿದ್ದರು. ನಾಟಕಕ್ಕೆ ಬೆಳಕಿನ ಹೊಳಪು ನೀಡಿದ್ದು ನಾಗರಾಜ ಪಾಟೀಲ ಅವನ ಕೈ ಚಳಕವೂ ಯಶಸ್ವಿಗೆ ಮೆಟ್ಟಿಲು ಕೂಡಾ ಅಲ್ಲವೇ? ಒಟ್ಟಿನಲ್ಲಿ ನನ್ನ ಮನ ಸೆಳೆದ ಪೌರಾಣಿಕ ನಾಟಕವಿದು

– ನೀವು ಮರೆಯದೇ ನೋಡಿ...
ಕನಸು ಕಂಗಳ ಚೆಲುವೆ
ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ Reviewed by ಕನಸು ಕಂಗಳ ಚೆಲುವೆ on December 03, 2017 Rating: 5

6 comments:

  1. ಅತ್ಯುತ್ರಮ ಬರಹ,

    ReplyDelete
  2. ಚೆನ್ನಾಗಿ ಬರೆದಿದ್ದೀರಿ..

    ReplyDelete
  3. ಬರವಣಿಗೆ ಚೆನ್ನಾಗಿದೆ. ನರೆಶನ್ ಇಷ್ಟವಾಯಿತು. ಹೀಗೆ ಸಾಗಲಿ ನಿಮ್ಮ ಅಕ್ಷರ ಲೋಕದ ಪಯಣ. ಶುಭವಾಗಲಿ

    ReplyDelete
  4. ಬರವಣಿಗೆ ಚೆನ್ನಾಗಿದೆ. ನರೆಶನ್ ಇಷ್ಟವಾಯಿತು. ಹೀಗೆ ಸಾಗಲಿ ನಿಮ್ಮ ಅಕ್ಷರ ಲೋಕದ ಪಯಣ. ಶುಭವಾಗಲಿ

    ReplyDelete
  5. ಒಳ್ಳೆಯದಾಗಲಿ ನಿಮಗೆ ಮೇಡಮ್

    ReplyDelete
  6. ಧನ್ಯವಾದಗಳು ಎಲ್ಲರಿಗೂ

    ReplyDelete

Contact For Website Designing - Low Rates
Mob: 9448841652
Powered by Blogger.