ನಾನು ಧಾರವಾಡದಿಂದ ಬೆಳಗಾವಿಗೆ ಒಂದೆರಡು ದಿನ ಇರಲೆಂದು ಹೋದಾಗಲೆಲ್ಲ ಬೆಳಗಾವಿ ಕಿಲ್ಲಾಗೆ ಹೋಗಿಯೇ ಹೋಗ್ತಿನಿ. ಒಂದು ಅಲ್ಲಿರುವ ದುರ್ಗಾದೇವಿ ದೇವಾಲಯಕ್ಕೆ ಇನ್ನೊಂದು ಅಲ್ಲಿರುವ ' ಕಮಲ ಬಸ್ತಿಗೆ ' ಬಸದಿಯ ಹಿಂದೆ ನಡುವೆ ರಾಮಕೃಷ್ಣ ಆಶ್ರಮವೂ ಒಂದು...ನನಗೆ ಅಲ್ಲಿಗೆ ಹೋದರೆ ಮನಸಿಗೆ ಹಿತಕೊಡುವ ಆಹ್ಲಾದಕರವಾದ ತಾಣ ಎನಿಸುತ್ತದೆ. ಬೆಳಗಾವಿಯಲ್ಲಿಯೇ ಸುಂದರವಾದ ' ನೇಚರ್ ' ಸವಿಯುವ ಮನಸಿದ್ದವರಿಗೆ ಈ ಕಿಲ್ಲಾ ಒಳಗಡೆ ಅದೇನೋ ಸುಖಕೊಡುವ ಜಾಗವಿದೆ ಎಂದರೆ ತಪ್ಪೆನಿಲ್ಲ. ನಾನಂತೂ ಬಹಳಷ್ಟು ಸಾರಿ ಕಮಲ ಬಸ್ತಿಗೆ ಹೋಗಿ ಬಸ್ತಿಯ ಒಳಗೆ ಇರುವ ಆ ಸುಂದರವಾದ ಶಿಲಾ ಕಂಬಗಳ ನಡುವೆ ಕುಳಿತುಕೊಂಡು ಬಿಡ್ತಿನಿ.
ಅಲ್ಲಿ ಹೊರಗೆ ಇರುವ ಜನದಟ್ಟಣೆ ಮಾತ್ರ ಇರುವುದಿಲ್ಲ. ಈ ಬಾರಿಯೂ ಕೂಡಾ ಈ ' ಕೊವೀಡ 19 ' ವೈರಸ್ ಹಾವಳಿಯಿಂದ ಮೂರು ತಿಂಗಳು ಅಂದರೆ ಮಾರ್ಚ್, ಎಪ್ರಿಲ್, ಮೇ ಜೂನ್ ಹೀಗೆಯೇ ಮನೆಯ ಒಳಗಡೆಯೇ ಕುಳಿತು ರೋಸಿ ಹೋದ ಮನಸಿಗೆ ಒಂದು ನೆಮ್ಮದಿ ಅಂತ ಬೇಕೆನಿಸಿತು ಅಂದರೆ ಸರ್ಕಾರ ಲಾಕಡೌನ್ ಘೋಷಿಸಿದಾಗ ನಾನು ಕೇವಲ ಎರಡು ದಿನಕ್ಕಾಗಿ ಬೆಳಗಾವಿಗೆ ಹೋದರೂ ಅಲ್ಲಿಯೇ ಲಾಕಡೌನ್ ಆಗಿ ಬಿಟ್ಟೆ..!
ಇನ್ನೇನು ಮೊನ್ನೆ ಮೊನ್ನೆ ಲಾಕಡೌನ್ ಸಡಿಲವಾಗಿ ಅಂಗಡಿ ಪೇಟೆಗಳು ತೆರೆದು ಜನರು ನಿಧಾನವಾಗಿ ತಮ್ಮ ಹಳೆಯ ವಾಸ್ತವ ಬದುಕಿಗೆ ಮರಳುವಾಗ ನಾನೂ ವಾಪಸು ಧಾರಾನಗರಿ ಧಾರವಾಡಕ್ಕೆ ಬರಬೇಕೆಂದು ಯೋಚಿಸಿದೆ. ಹೀಗೆ ಯೋಚನೆ ಬಂದದ್ದೇ ತಡ ದಿಢೀರ್ ಅಂತ ನೆನಪಾಯಿತು ಏನೆಂದರೆ ಮೂರು ತಿಂಗಳಿನಿಂದ ಸ್ಕೂಟಿ ಮೇಲೆ ಕಾಲೇ ಇಟ್ಟಿರಲೇ ಇಲ್ಲ ಅಂದರೆ ನಾನೆಂದೂ ಸ್ಕೂಟಿ ಮೇಲೆ ಹೊರಗಡೆ ಹೋಗಿಲ್ಲವೆಂದು. ಇದೇ ನನ್ನ ಹೀರೋ ಬೈಕ್ ...! ಇದರ ಮೇಲೆಯೇ ನನ್ನ ಪಯಣ ಯಾವಾಗಲೂ 'ಬೆಳಗಾವಿ ಟು ಧಾರವಾಡ, ಧಾರವಾಡ ಟು ಬೆಳಗಾವಿ ' ನಡೆದೇ ಇರುತ್ತದೆ. ಒಮ್ಮೊಮ್ಮೆ ಕಾರಲ್ಲಿ ಹೋದರೂ ಸಹ ಬೈಕ್ ನಲ್ಲಿ ಹೋಗುವ ಮಜವೇ ಬೇರೆ. ತುಂಬಾ ಜನ ' ' ಅಬ್ಬಾ ...! ನೀವು ಅಲ್ಲಿಯವರೆಗೆ ಬೈಕ್ ನಲ್ಲಿ ಹೋಗ್ತಿರಾ ಹುಷಾರಾಗಿ ಇರಿ ' ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಆದರೆ ನಾನು ಅದರಲ್ಲೇ ಹೋಗಲು ಇಷ್ಟ ಪಡುತ್ತೇನೆ.
ಈಗಂತೂ ಮತ್ತೊಂದು ದಾರಿಯೇ ಇರಲಿಲ್ಲ ಬರುವಾಗ ಈ ಗಾಡಿಲಿ ಬಂದದ್ದು ಅಲ್ಲವಾ ಮತ್ತೆ ವಾಪಸು ತೊಗೊಂಡು ಹೋಗಲೇ ಬೇಕಿತ್ತು. ಸೋ..ನಾಳೆ ಧಾರವಾಡ ಹೋಗಬೇಕು ಅಂತ ತೀರ್ಮಾನಕ್ಕೆ ಬಂದಿದ್ದೇ ತಡ ಇವತ್ತು ಬೈಕ್ ಹತ್ತಿ ಒಂದು ರೌಂಡ್ ಬೆಳಗಾವಿ ಸುತ್ತಿ ಬರೋಣ ಅನಿಸಿತು. ' ಹ ಹ ಹ ನಿಜವಾಗಿ ಹೇಳಬೇಕೆಂದರೆ ನಾನು ಗಾಡಿ ಡ್ರೈವ್ ಮಾಡುವುದು ಮರೆತಿದ್ದಿನಾ ಅಂತ ಚೆಕ್ ಮಾಡಬೇಕಿತ್ತು.
ತಲೆಯಲ್ಲಿ ಯೋಚನೆ ಬಂದೊಡನೆ ಹೊರಟೇ ಬಿಟ್ಟೆ ಹ್ಮೂಂ ನಾನು ಸ್ವಲ್ಪ Moody ...
ಮೊದಲು ಹೋಗಿದ್ದು ಮಿಲ್ಟ್ರಿ ಮಹಾದೇವ ಮಂದಿರ ಬೆಳಗಾವಿಯಲ್ಲಿ ಈ ಮಂದಿರವೂ ಅಷ್ಟೇ ಫೇಮಸ್ ಈ ಮಿಲ್ಟ್ರಿ ಮಹಾದೇವ ಮಂದಿರದ ಬಗ್ಗೆ ಮತ್ತೊಂದು ಸಲ ಬರೆಯುವೆ...
ಮಹಾದೇವಿ ಮಂದಿರದಿಂದ ನೇರವಾಗಿ ನಾನು ಮೊದಲು ಬಂದಿದ್ದು ಕಿಲ್ಲಾ ಒಳಗಡೆ ಇರುವ ದುರ್ಗಾದೇವಿ ದೇವಾಲಯಕ್ಕೆ. ಅಲ್ಲಿ ದೇವಿಯ ದರ್ಶನ ಪಡೆದು ಕಿಲ್ಲಾ ಒಳಗಡೆ ಇರುವ 'ಕಮಲಬಸ್ತಿ' ಕಿಲ್ಲಾ ಒಳಗಡೆ ಎಲ್ಲಾ ಮಿಲ್ಟ್ರಿ ಕಾವಲು ಇದೆ.
ಸುತ್ತಮುತ್ತಲಿನ ಪ್ರದೇಶ ಕೋಟೆಯ ಭದ್ರತೆ ಒದಗಿಸುವ ಜವಾಬ್ದಾರಿ ಮಿಲ್ಟ್ರಿ ವಹಿಸಿಕೊಂಡಿದೆ. ಒಳಗಡೆ ಇರುವ ಆ ಶಾಂತ ವಾತಾವರಣ ಯಾರ ಮನಸನ್ನಾದರೂ ಸೆಳೆಯದೇ ಬಿಡಲಾರದು.
ದುರ್ಗಾದೇವಿ ದೇವಾಲಯದಿಂದ ಹಾಗೆಯೇ ಒಳಗಡೆಯಿಂದ ಹೊರಗೆ ಬರುವ ರಸ್ತೆಗೆ ಬಂದರೆ ಮೊದಲು ರಾಮಕೃಷ್ಣ ಆಶ್ರಮ ನಂತರ ಸಿಗುವುದೇ ' ಕಮಲ ಬಸ್ತಿ ' ಮುಖಕ್ಕೆ ಬಂದು ಎರಚುವ ತಣ್ಣನೆಯ ಗಾಳಿ ಯಾವುದೋ ಪ್ರಪಂಚಕ್ಕೆ ನಮ್ಮನ್ನು ಕರೆದೊಯ್ದಂತೆ ಭಾಸ...
ಇನ್ನಷ್ಟು ಹತ್ತಿರ ಹೋಗುತ್ತಿದ್ದಂತೆ ಆ ಹಾ ಹಾ ಅದೆಂತಹ ಕಲ್ಲಿನ ಸುಂದರ ದೇವಾಲಯ ಆಕರ್ಷಣೆ ಹೇಳಲಾಗದು.
ಕಮಲದ ಹೂವಿನ ಜೊತೆಗಿರುವ ಏನೋ ಒಂದು ನಂಟು ಅಂತ.ಅದೇ ಒಳಗಿರುವ ಮುಖಮಂಟಪ ಕಮಲದ ಪಕಳೆಯಂತೆ ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ಇದರ ಆಕರ್ಷಣೆ ಎಲ್ಲರನ್ನೂ ಸೆಳೆಯುತ್ತದೆ.
ಈ ದೇವಾಲಯ ಚಾಲುಕ್ಯರ ಕಾಲದ್ದು ಎಂದು ಹೇಳುವ ಕುರುಹುಗಳು ಇವೆ.ಈ ದೇವಾಲಯ ದ ಸುತ್ತಲೂ ಹಸಿರು ಹುಲ್ಲು ಹಾಸು ಆ ಹುಲ್ಲಿನ ದಂಡೆಗೆ ತಂಗಿನ ಮರದಂತಿರುವ ಕ್ರೋಟನ್ ಮರಗಳು ನೋಡೋಕೆ ಚೆಂದ.
ಗಡಿಯೊಳಗೆ ಹೋಗಿ ನೇಮಿನಾಥನಿಗೆ ನಮಸ್ಕರಿಸಿ ಹೊರಗೆ ಬಂದೆ ಮೊಬೈಲ್ ಫೋನ್ ಕ್ಲಿಕ್ ಕ್ಲಿಕ್ ಶಬ್ದವು ಕೇಳಿಸ್ತಾ ಇತ್ತು. ಗುಡಿಯ ಹೊರಗಡೆ ಏಳೆಂಟು ತರುಣರು ಸೆಲ್ಫಿ ಫೋಟೋ ತೆಗೆದುಕೊಳ್ಳುವಲ್ಲಿ ಬ್ಯೂಸಿ ಇದ್ದರು. ನಾನು ಹಾಗೆಯೇ ಒಂದು ಸೆಲ್ಫಿ ಫೋಟೋ ತೆಗೆದುಕೊಬೇಕು ಅನ್ನುವ ಅಷ್ಟರಲ್ಲಿ ಅಲ್ಲಿಯೇ ಇದ್ದ ಕಾವಲುಗಾರ ಎಚ್ಚರಿಕೆ ಕೊಟ್ಟ' ಹೊರಗಡೆ ಬೇಕಾದಷ್ಟು ಫೋಟೋ ತೆಗೆಯಿರಿ ಆದರೆ ಒಳಗಡೆ ತೆಗೆಯಬೇಡಿ ' ಎಂದು. ನಾನು ಹ್ಮೂಂ ಎಂದು ಗುಡಿಯ ಸುತ್ತ ಪ್ರದಕ್ಷಿಣೆ ಹಾಕಲು ಹೋದೆ. ಗುಡಿಯ ಹಿಂದುಗಡೆ ಭಾಗದಲ್ಲಿ ಆ ತರುಣರ ಗುಂಪು ಕೇಕೆ ಹಾಕುತ್ತಲೇ ಫೋಟೋ ಕ್ಲಿಕ್ಕಿಸುತ್ತಲೇ ನನ್ನ ಮುಂದೆ ಮುಂದೆ ಸಾಗಿದ್ದರು.
ಗುಡಿಯ ಪಕ್ಕದಲ್ಲಿ ಇರುವ ಹುಲ್ಲು ಹಾಸಿನಲ್ಲಿ ಸಾಲಾಗಿ ಕುಳಿತು ಆ ಯುವಕರೆಲ್ಲ ಪ್ರಾಣಾಯಾಮ ಮಾಡುವ ಭಂಗಿಯಲ್ಲಿ ಕುಳಿತ್ತಿದ್ದರು ಮತ್ತು ಅದರಲ್ಲಿ ಒಬ್ಬ ಫೋಟೋ ತೆಗೆಯುತ್ತಿದ್ದನು ನನ್ನನ್ನು ನೋಡಿದ ಆ ಯುವಕ ಸ್ವಲ್ಪ ಮುಂದೆ ಬಂದು " excuse me ಮೇಡಂ ಹಮಾರಿ ಏಕ ಫೋಟೋ ಖಿಂಚಿಯೇ " ಅಂದು ತನ್ನ ಮೊಬೈಲ್ ನನ್ನ ಕೈಗಿತ್ತ. ನಾನು " ಹಾ ಜಿ ಜರೂರ ' ಅಂತ ಹೇಳಿ ಅವರೆಲ್ಲರ ಯೋಗಾಸನ ಭಂಗಿಗಳ ಫೋಟೋ ಕ್ಲಿಕ್ಕಿಸಿದೆ. ನಾನೇ ಅವರನ್ನು " ಐಸಾ ಕಿಂವ್" ( ಹೀಗೇಕೆ ) ಅಂದೆ.ಆಗ ಅವರು " ಆಜ ಯೋಗಾ ಡೇ ಹೈ ಮೇಡಂ " ಅಂದರು ನಾನು ಮುಗುಳ್ನಗೆ ನಕ್ಕೆ . ಮೊಬೈಲ್ ಹಿಂತಿರುಗಿ ಕೊಟ್ಟೆ ಆಗ ಆ ಹುಡುಗ ವಿನಯದಿಂದ " ಕ್ಯಾ ಮೈ ಆಪಕಾ ಫೋಟೋ ಲೇ ಲ್ಞೂಂ ಮೆಡಮ್ " ಅಂತ .ನಾನು " ಜೀ" ಅಂದು ನನ್ನ ಮೊಬೈಲ್ ಅವನ ಕೈಗೆ ನೀಡಿದೆ. ನನ್ನನ್ನು ಗುಡಿಯ ಮುಂದೆ, ಪಕ್ಕಕ್ಕೆ ಮತ್ತೆ ಹಿಂದುಗಡೆ ಹೀಗೆ ನಿಲ್ಲಿಸಿ ಒಂದಿಷ್ಟು ಫೋಟೋ ಕ್ಲಿಕ್ಕಿಸಿ ಮೊಬೈಲ್ ವಾಪಸು ಕೊಟ್ಟ.
ಅವನಿಗೆ ಒಂದು ಧನ್ಯವಾದ ಹೇಳಿ ಗುಡಿಯ ಹೊರಗಡೆಗೆ ನಿಂತು ಒಂದಿಷ್ಟು ಸೆಲ್ಫಿ ಫೋಟೋ ತೆಗೆದುಕೊಂಡು ಮತ್ತೆ ಗುಡಿಯ ಸುತ್ತಲೂ ಕಣ್ಣಾಡಿಸಿದೆ ಹಚ್ಚ ಹಸಿರು ಎರಡು ದಿನದಿಂದ ಸುರಿಯುವ ಮಳೆಗೆ ಇಳೆಯ ಚಹರೆ ರಂಗೇರಿತ್ತು. ಗುಡಿಯ ಸುತ್ತಲೂ ಜನರಿಗೆ ತಿರುಗಾಡಲೂ ಒಳ್ಳೆಯ ಕಲ್ಲಿನ ಹಾಸು ಇದೆ. ಗುಡಿಯ ಮೇಲ್ವಿಚಾರಣೆ ಮಾತ್ರ ಮಿಲ್ಟ್ರಿ ಯವರೇ ಮಾಡುವುದು ಇಲ್ಲಿ.
ಇದೊಂದು ಐತಿಹಾಸಿಕ ಸ್ಮಾರಕವೂ ಹೌದು ಆದರೆ ಅಷ್ಟೇನೂ ಜನಪ್ರಿಯತೆ ಗಳಿಸಿಲ್ಲವೆಂದರೂ ಸರಿ.
ಪ್ರತಿನಿತ್ಯ ಗುಡಿಯಲ್ಲಿ ನೇಮಿನಾಥನಿಗೆ ಪೂಜೆ ನಡೆಯುತ್ತದೆ. ಸರ್ಕಾರದಿಂದ ದತ್ತು ಪಡೆದು ಪೂಜೆ ಸಲ್ಲಿಸುತ್ತಿರುವ ಕೆಲವು ದೇವಾಲಯಗಳಲ್ಲಿ ಈ ದೇವಾಲಯ ಕೂಡಾ ಆಗಿದೆ. ಕಮಲ ಬಸ್ತಿಯ ಎದುರಿಗೆ ಗುಡಿಯ ಬಲಗಡೆಗೆ ಸ್ವಲ್ಪ ದೂರದಲ್ಲಿ ಇನ್ನೊಂದು ಜೀನಾಲಯವಿದೆ ಅಲ್ಲಿ ಒಳಗಡೆ ಮಾತ್ರ ಎಲ್ಲಾ ಪಾಳುಬಿದ್ದ ಅವಶೇಷಗಳು ಇವೆ. ಆದರೆ ಹೊರಗಡೆ ಸುತ್ತಲೂ ಶಿಲ್ಪ ಕಲಾ ಎದ್ದು ತೋರುತ್ತದೆ.ಆದರೆ ಈಗ ಹೊರಗಡೆ ಮಾತ್ರ ಎಲ್ಲರೂ ಮೊಬೈಲ್ ಫೋಟೋ ತೆಗೆದು ಕೊಳ್ಳುವ ತಾಣವಾಗಿದೆ ಅಂದ್ಹೇಳಬಹುದು ಅಷ್ಟೇ..
ಗುಡಿಯ ಮುಂದಿನ ಕಟ್ಟೆಯ ಮೇಲೆ ಕುಳಿತು ಚಿತ್ರ ತೆಗಿಸಿಕೊಳ್ಳುವುದೇ ಒಂದು ಚೆಂದ...
ಹ್ಮೂಂ ಈಗ ಈ ಕಮಲ ಬಸ್ತಿಯ ಬಗ್ಗೆ ಮಾಹಿತಿ ಹೇಳಬೇಕೆಂದರೆ ಇಪ್ಪತ್ತೆರಡನೆಯ ಜೈನ ತೀರ್ಥಂಕರನಾದ ಶ್ರೀ ನೇಮಿನಾಥನ ದೇವಾಲಯವಾಗಿದೆ. ಇದನ್ನು 1204 ರಲ್ಲಿ ನಿರ್ಮಿಸಲಾಗಿದೆ ಎಂದು ಅಲ್ಲಿರುವ ಪುರಾತತ್ವ ಇಲಾಖೆ ನಿಲ್ಲಿಸಿರುವ ಫಲಕ ಹೇಳುತ್ತದೆ.
ಈ ಕಮಲ ಬಸ್ತಿ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ಇದರ ' ಮುಖಮಂಟಪ ' ಕಮಲಬಸದಿ ಎಂಬ ಹೆಸರು ಬಂದಿರುವುದೇ ಈ ರಂಗಮಂಟಪ ಅಥವಾ ಮುಖಮಂಟಪದಿಂದ. ಇದನ್ನು ಎತ್ತರದಲ್ಲಿ ಮೇಲ್ಛಾವಣಿಯಲ್ಲಿ ಕಮಲ ಹೂವಿನ ಆಕಾರದಲ್ಲಿ ಕೆತ್ತಲಾಗಿದೆ. ಇಲ್ಲಿ ಕೆತ್ತಲ್ಪಟ್ಟ ಕಮಲದ ಹೂವು ಏಕಶಿಲಾ ಶಿಲ್ಪವಾಗಿದೆ ಮತ್ತು ಸಂಪೂರ್ಣವಾಗಿ ಮೇಲ್ಛಾವಣಿಯನ್ನು ಅದು ಆವರಿಸಿಕೊಂಡು ತನ್ನ ಸೂಕ್ಷ್ಮ ಕುಸುರಿ ಕೆಲಸಕ್ಕೆ ಹೆಸರಾಗಿದೆ.
ಆಶ್ಚರ್ಯ ವೆಂದರೆ ಇದನ್ನೆಲ್ಲ ಕೆತ್ತಿ ಇಷ್ಟು ಎತ್ತರಕ್ಕೆ ಹೇಗೆ ಏರಿಸಿಜೋಡಿಸಿದರೋ ತಿಳಿಯದು.ಇಷ್ಟಲ್ಲದೆ ಇಲ್ಲಿನ ಇನ್ನೊಂದು ವಿಶೇಷವೆಂದರೆ ಕಂಬಗಳು ಅಬ್ಬಾ..! ಎಂತಹ ಸುಂದರ ಅವು ಕಪ್ಪನೆಯ ಮಾರ್ಬಲ್ ನಿಂದ ನಿರ್ಮಾಣಗೊಂಡಿವೆ ಹಾಗೆಯೇ ತುಂಬಾ ನುಣಪಾಗಿವೆ. ಈ ಗುಡಿಗೆ ಶೃಂಗಾರ ಬಂದಿದ್ದು ಈ ಕಂಬಗಳಿಂದಲೇ ಅನ್ನಬಹುದು.
ಚಾಲುಕ್ಯ ಶೈಲಿಯ ಈ ಬಸ್ತಿಯನ್ನು ರಟ್ಟ ರಾಜವಂಶದ ನಾಲ್ಕನೆಯ ಕಾರ್ತವಿರ್ಯನ ಕಾಲದಲ್ಲಿ ಈತನ ಮಂತ್ರಿಯಾಗಿದ್ದಂತಹ ಬಿಚಿರಾಜನು ಕಟ್ಟಿಸಿದನು.ರಟ್ಟರು ರಾಷ್ಟ್ರಕೂಟರ ಅಚ್ಚ ಕನ್ನಡ ಸಾಮಂತ ರಾಜರಾಗಿದ್ದು ಇವರು ಮೊದಲು ಈಗಿನ ಸವದತ್ತಿ ಅದನ್ನು ಮೊದಲು ಸುಗಂಧವರ್ತಿ ಅಂತಿದ್ದರು. ವೇಣುಗ್ರಾಮ್ ಇವತ್ತಿನ ಬೆಳಗಾವಿ ಇಲ್ಲಿಂದ ರಾಜ್ಯವಾಳಿದರು ಒಂದು ಮೂಲಗಳ ಪ್ರಕಾರ ಬೆಳಗಾವಿಯ ಈ ಕಿಲ್ಲಾದಲ್ಲಿ ಇಪ್ಪತ್ತೆರಡಕ್ಕೂ ಹೆಚ್ಚಿನ ದೇವಾಲಯಗಳಿದ್ದವು ಆದರೆ ನಿರಂತರ ಬಿಜಾಪೂರ ಸುಲ್ತಾನರ ದಾಳಿಗಳಿಂದ ಇವು ನಾಶವಾಗಿ ಹೋಗಿವೆ ಈಗ ಕೇವಲ ಇವೆರಡು ಮಾತ್ರವೇ ಉಳಿದು ಜನರ ಆಕರ್ಷಣೆಯ ತಾಣವಾಗಿವೆ.
ನಾನು ಮತ್ತೆ ವಾಪಸು ಗುಡಿಯ ಒಳಗಡೆ ಹೋಗಿ ಕಂಬಗಳಿರುವ ಕಟ್ಟೆಯ ಮೇಲೆ ಕುಳಿತುಕೊಂಡೆನು ಅಲ್ಲಿಯೇ ಇದ್ದ ಕಾವಲುಗಾರ ನನ್ನನ್ನು ನೋಡುತ್ತಿದ್ದದ್ದನ್ನು ಗಮನಿಸಿ ಅವನಿಗೆ " ಏನಜ್ಜ ಈಗ ಒಳಗಡೆ ಎಲ್ಲರನ್ನೂ ಬಿಡತಾ ಇದ್ದಿರಾ ? " ಎಂದು ಕೇಳಿದೆ. ಇಷ್ಟು ಬೇಕಿತ್ತು ಪಾಪ ಅಜ್ಜನಿಗೆ " ಹ್ಞೂಂ , ಈಗ ಬಾಳ ಜನಾ ಬರ್ತಿಲ್ಲ. ಅಲ್ಲಿಗೊಬ್ಬರು ಇಲ್ಲಿಗೊಬ್ಬರು ಅಷ್ಟೇ ಬಂದ ನಮಸ್ಕಾರ ಮಾಡಿ ಹೊಕ್ಕಾರು ಯಾಕಂದ್ರ ಈಗ ಈ ಕೊರೊನಾ ವೈರಸ್ ಬಂದೈತಲ್ಲ ಎಲ್ಲಾರೂ ಅಂಜ್ಯಾರು " ಅಂತ ಜೋರಾಗಿ ನಕ್ಕ.
ಅವನು ನನ್ನ ಜೊತೆಗೆ ಮಾತಾಡ್ತಾ ಇನ್ನೊಂದು ಕಟ್ಟೆಯ ಮೇಲೆ ಕುಳಿತು ಆಗ ತಾನೇ ಗುಡಿಯ ಪ್ರಾಂಗಣದ ಹೊರಗೆ ಇರುವ ಗಿಡಗಂಟಿಗಳಲ್ಲಿ ಸಳಕ್ಕೆಂದು ಸರಿದು ಹೋದ ದೊಡ್ಡ ಹಾವಿನ ಬಗ್ಗೆ ಹೇಳತೊಡಗಿದ ಇಷ್ಟಗಲ ಬಾಯಿ ತೆಗೆದು " ಇಲ್ಲಿ ಬಾಳ ಇರ್ತಾವರೀ ಹಾವು ಮೊನ್ನೆ ಮೊನ್ನೆನೆ ದೊಡ್ಡ ಹಾವು ಮಿಲ್ಟ್ರಿ ಯವರು ಹಾವಾಡಿಗನ ಕರೆಸಿ ಹಿಡಿಸಿ ಕಾಡಿಗೆ ಬಿಟ್ಟಬಂದ ಕಥೆ ಹೇಳಿದ. ಅದಕ್ಕೆ ಎಲ್ಲರೂ ನೋಡಿಕೊಂಡ ಅಡ್ಡಾಡುವ ಬಗ್ಗೆ ತಿಳಿಸಿ ಹೇಳಿ ತನ್ನ ಕೆಲಸ ತಿಳಿಸಿದ.ಮತ್ತೆ ಮಾತನಾಡುತ್ತ ಕೋವಿಡ - 19 ಬಗ್ಗೆ ಸಾಕಷ್ಟು ಮಾತಾಡಿದ ದೊಡ್ಡ ರೋಗ ಬಂದೈತವಾ ಎಷ್ಟಾಕೊಂಡ ಜನ ಸಾಯಾಕತ್ತಾರ. ಸಾಲಿಗಳು ( ಶಾಲೆಗಳು) ಶುರುವಾಗಿಲ್ಲ." ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ. " ಹೆಂಗ ಮಾಡುದ್ರಿ ಹಿಂಗ್ ಆದ್ರ... ಪಾಪ ಎಲ್ಲಾರ ಹೊಟ್ಟಿ ಮ್ಯಾಲ ಬಾಳ ತ್ರಾಸ ಆತು ನೋಡ್ರಿ ಈ ರೋಗ ಬಂದು" ಅನ್ನುತ್ತಾ ಸಾಮಾಜಿಕ ಕಾಳಜಿ ವ್ಯಕ್ತ ಪಡಿಸಿದ ಹಾಗೆ ಮಾತಾಡ್ತಾ ಕುಳಿತಿದ್ದೆ ಗೊತ್ತಾಗಲಿಲ್ಲ ಸಂಜೆ ನಾಲ್ಕು ಆಯಿತು.
ಕನಸು ಕಂಗಳ ಚೆಲುವೆ
ಪ್ರೇಮಾ.....
( ಮಾಹಿತಿ - ಸಾಮಾಜಿಕ ಜಾಲತಾಣದ ಸಹಾಯ, ಫೋಟೋ ಸಂಗ್ರಹ - ಸ್ವತಃ ಲೇಖಕಿಯ ಮೊಬೈಲ್ ಕ್ಲಿಕಗಳು, ಪುರಾತತ್ವ ಇಲಾಖೆಯ ಫಲಕದ ಮಾಹಿತಿ )
ಕಮಲದ ಪಕಳೆಯಂಗ ಮುಖಮಂಟಪ ಅದೇ ಬೆಳಗಾವಿ ಕಮಲ ಬಸ್ತಿ
Reviewed by ಕನಸು ಕಂಗಳ ಚೆಲುವೆ
on
July 07, 2020
Rating:
Reviewed by ಕನಸು ಕಂಗಳ ಚೆಲುವೆ
on
July 07, 2020
Rating:
Nice madam
ReplyDeleteThank you
Deleteಸುಂದರ ಚಿತ್ರಣ ಬೆಳಗಾವಿಯ ಒಳಗ ಇಷ್ಟೆಲ್ಲ ಇದ್ದದ್ದು ನನಗೆ ಗೊತ್ತು ಮಾಡಿಸಿದ್ದಾಕ್ಕಾಗಿ ಧನ್ಯವಾದಗಳು
ReplyDeleteನಿಮಗೂ ಕೂಡ ಅತ್ಯಂತ ಧನ್ಯವಾದಗಳು
Deleteಮೆಚ್ಚುಗೆ ವ್ಯಕ್ತ ಪಡಿಸಿದ ತಮಗೆ ಧನ್ಯವಾದಗಳು
ReplyDelete