" ಆಪ್ತತೆಯ ನಗೆಮೊಗದ ಗಿರಡ್ಡಿ ಸರ್ "
" ಆಪ್ತತೆಯ ನಗೆಮೊಗದ ಗಿರಡ್ಡಿ ಸರ್ "
ನನಗಿನ್ನೂ ನೆನಪಿದೆ ಅಂದು ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನನ್ನ ಹೆಸರು ನೊಂದಾಯಿಸಲು ಅಂತ ಮನೋಹರ ಗ್ರಂಥಮಾಲೆ ಅದೇ ಅಟ್ಟದ ಮೇಲೆ ಹೋಗಿದ್ದು " ಈ ಸಲಾ ನಿನ್ನ ಯಜಮಾನರನ್ನು ಕರ್ಕೊಂಡ್ ಬಾರವಾ " ಅಂತ ಗಿರಡ್ಡಿ ಸರ್ ಹೇಳಿ ಮುಗಳ್ನಗೆ ನಕ್ಕರು .ನಾನು ಅವರ ಜೊತೆಗೆ ನಗುತಾ " ಈ ಸಾರಿ ಬರ್ತಾರೆ ಸರ್ ಅವರ ಹೆಸರು ನೊಂದಾಯಿಸತಾ ಇದ್ದೇನೆ " ಅಂತ ಹೇಳಿದ್ದು ಇನ್ನೂ ನನ್ನ ಸ್ಮರಣೆಯಲ್ಲಿ ಇದೆ. ನಾನು ಹಾಗೆ ಹೇಳಿದಾಗ ಅಲ್ಲಿದ್ದ ಬಾಳಣ್ಣ ಶಿಗೇಹಳ್ಳಿ, ರಾಘವೇಂದ್ರ ಪಾಟಿಲ ಸರ್, ಮಲ್ಲಿಕಾರ್ಜುನ ಪಾಟೀಲ, ರಮಾಕಾಂತ ಜೋಶಿ ಸರ್ ಮತ್ತು ಸಮೀರ ಜೋಶಿ ಎಲ್ಲರೂ ನಕ್ಕಿದ್ದು ಒಂದಿಷ್ಟು ತಮಾಷೆ ಮಾಡಿದ್ದು ಕೂಡಾ ನೆನಪಿದೆ .ಗಿರಡ್ಡಿ ಸರ್ ಅವರ ಶಾಂತ ಮುಗುಳ್ನಗೆ ಮರೆಯಲು ಸಾಧ್ಯವಿಲ್ಲದ ಮಾತದು.
ಎಲ್ಲರೂ ಅವರನ್ನು ನೇರ ನುಡಿಯ ಸ್ವಭಾವದವರು ಅಂತ ಹೇಳುವುದನ್ನು ಕೇಳಿ ಒಂದಿಷ್ಟು ಸಮಯದವರಗೆ ನಾನು ಗಿರಡ್ಡಿ ಸರ್ ಅವರೊಡನೆ ಮಾತನಾಡಲು ಭಯಪಟ್ಟಿದ್ದು ಉಂಟು . ದಿನಗಳು ಕಳೆದಂತೆ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿವಹಿಸಿದಾಗ ಅವರ ಸ್ವಭಾವ ಕಂಡದ್ದು ಶಾಂತ ಮತ್ತು ಲಯ ತುಂಬಿದ ಮೂರ್ತಿಯಂತೆ. " ಹ್ಮೂಂ ಆರಾಮ ಅದಿ ಏನವಾ " ಇಷ್ಟೇ ಮಾತು ಮುಂದೆ ಮಾತೇ ಇಲ್ಲ ಆದರೆ ಆಪ್ತತೆಯ ಒಂದು ನಗೆ ಮಾತ್ರ ಇರುತ್ತಿತ್ತು ಅವರ ಮೊಗದಲ್ಲಿ.
ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರೊಂದಿಗೆ ನನ್ನ ಸಂಪರ್ಕ ಬಂದಿದ್ದು ನನ್ನ ಪುಣ್ಯವೋ ನಾ ಕಾಣೆ ಇದೆಲ್ಲ ಮಾಸಲಾರದು.ಅದೊಂದು ದಿನ ಅಗಸ್ಟ್ ೧೫ ರ ದಿನ ಸ್ವಾತಂತ್ರ್ಯ ಉತ್ಸವದ ದಿನ ಬಿ.ಜಯಶ್ರೀ ಯವರ ಆತ್ಮಕಥೆ ಕೃತಿ *ಕಣ್ಣೆ ಮುಚ್ಚೆ ಕಾಡೇ ಗೂಡೆ* ರಂಗಾಯಣ ಸಮುಚ್ಚಯ ಭವನದಲ್ಲಿ ಕೃತಿ ಬಿಡುಗಡೆ ಏರ್ಪಟ್ಟಿತು ನಾನು ಹೋಗಿದ್ದೆ ಆವಾಗ " ಏನವ್ವಾ ಏನೋ ಕಾಡೋ ಗಿಡೋ ಎಲ್ಲಾ ತಿರುಗಾಡ್ತಿ , ಮತ್ತ ಸಿನೆಮಾ ಅಂತಿ , ಅಲೆಮಾರಿ ನೋಡು" ಅಂತ ಗಿರಡ್ಡಿ ಸರ್ ಅಂದ್ರು. ನನಗೆ ಆಶ್ಚರ್ಯ ಆಯಿತು
ಇವರು ಹೀಗೇಕೆ ಅಂದ್ರು ಅಂತ ನಂತರ ಹೊಳೆಯಿತು ಅದೇ ನನಗೆ ಹಿಂದಿ ಸಾಹಿತ್ಯದಲ್ಲಿ ವಿಶೇಷ ಸೇವೆ ಸೇವೆ ಸಲ್ಲಿಸಿದ್ದಕಾಗಿ ಆಸ್ಸಾಂ ನ ಗೋಹಾತಿಯಲ್ಲಿ *ವಿಶಿಷ್ಟ ಕಾವ್ಯ ಸನ್ಮಾನ* ಸಿಕ್ಕಾಗ ಅದನ್ನು ಪಡೆಯಲು ಅಲ್ಲಿ ಹೋದಾಗ ಅಲ್ಲಿ ಕಾಜಿರಂಗ ಅಭಯಾರಣ್ಯ ನೋಡಲು ಹೋಗಿದ್ದರ ಬಗ್ಗೆ ಗಿರಡ್ಡಿ ಸರ್ ಅವರ ಪೀಠಿಕೆ ಅಂತ . " ಹ್ಮೂಂ ಸರ್ " ಅಂದೆ ಆವಾಗ ಅವರೇ " ನೀನು ಬಾಳ ದೇಶ ತಿರುಗಾಡಾಕ ಶುರುಮಾಡಿದೆವಾ " ಅಂದ್ರು ನಾನು ಮುಗುಳ್ನಗೆ ಮಾತ್ರ ನಕ್ಕೆ. ಅವರಿಗೆ ಈ ವಿಷಯ ಹೇಗೆ ತಿಳಿಯಿತು ಅಂತಿರಾ ? ಗಿರಡ್ಡಿ ಸರ್ ಫೇಸ್‌ಬುಕ್ ನಲ್ಲಿ ನನಗೆ ಫ್ರೇಂಡ್ ಕೂಡಾ ಆಗಿದ್ದರು. ಸೋ ನಾನು ನನ್ನ ಫೇಸ್‌ಬುಕ್ ವಾಲನಲ್ಲಿ
ಎಲ್ಲಾ ಫೋಟೋ ಗಳನ್ನು ಮತ್ತು ಸ್ಟೇಟಸ್ ಹಾಕ್ತಿದ್ದೆ ಇದನ್ನು ನೋಡಿಯೇ ಅವರಿಗೆ ವಿಷಯ ತಿಳಿದು ಹಾಗೆ ಅವರು ಹೇಳಿದ್ದು.
ನಾನು ಅವರಿಗೆ ಮಗಳ ಹಾಗೆಯೇ ಖುಷಿಯಿಂದ ನಾನು ಅವರಿಗೆ ಶುಭದಿನದ ಮೆಸ್ಸೆಜು ಕಳಿಸಿದರೆ ಅದು ಯಾವಾಗಲೋ ಒಮ್ಮೆ ಅದಕ್ಕೆ ಉತ್ತರಿಸುತ್ತಿದ್ದರು. ಆದರೆ ನನಗೆ ಖುಷಿಯಾಗುತ್ತಿತ್ತು ಇಷ್ಟಾದರೂ ಇವರು ರಿಪ್ಲಾಯ್ ಮಾಡ್ತರಲ್ಲಾ ಅಂತ.ಹಿರಿಯರ ಆಶೀರ್ವಾದ ನನಗೆ ಬೆಳಕಾಗಲಿ ಅಂತ ಹೆಬ್ಬಯಕೆ ಅದಾಗಿತ್ತು.
ಹೀಗೆಯೇ ಬಹಳಷ್ಟು ಕಾರ್ಯಕ್ರಮಗಳಲ್ಲಿ ನನ್ನ ಗಿರಡ್ಡಿ ಸರ್ ಅವರ ಭೇಟಿ ಇದ್ದದ್ದೇ ಆದರೆ ಅವರಷ್ಟೇ ಅಲ್ಲಾ ಸಿದ್ದಲಿಂಗ ಪಟ್ಟಣಶೆಟ್ಟಿ ಸರ್ , ಬಾಳಣ್ಣ ಶೀಗೆಹಳ್ಳಿ ಸರ್ , ರಾಘವೇಂದ್ರ ಪಾಟೀಲ ಸರ್ , ಕೆಲವೊಮ್ಮೆ ಚಂಪಾ ಅವರ ಕೂಡಾ ಮುಖಾಮುಖಿಯಾಗಿ ಸಿಗುವುದು ಸಹಜವೇ ಆಗಿತ್ತು.
ನಾನು ಸ್ವಲ್ಪ ತಡವವಾಗಿಯೇ ಏನಾದರೂ ಕಾರ್ಯಕ್ರಮಕ್ಕೆ ಎಂಟ್ರಿ ಆದರೆ ಮೊದಲೇ ಸಮಯಕ್ಕೆ ಸರಿಯಾಗಿ ಬಂದು ಕುಳಿತಿರುವ ಈ ಎಲ್ಲಾ ಹಿರಿಯರ ಸ್ಮೈಲೀಂಗ ಫೇಸಿಸ್ ಕಂಡು ನನಗೆ ಖುಷಿ ಆದರೆ " ಈಗ ಸಭಾಂಗಣ ತುಂಬಿದಾಂಗ ಆಯತು ನೋಡವಾ " ಅಂತ ಬಾಳಣ್ಣ ಶೀಗೆಹಳ್ಳಿ ಸರ್ ತಮಾಷೆ ಮಾಡಿ ಹೇಳಿದಾಗ ಅವರ ಜೊತೆಗೆ ಎಲ್ಲರೂ ನಗುವರು ಗಿರಡ್ಡಿ ಸರ್ ಅದೇ ಒಂದು ಶಾಂತ ಮುಗ್ಧ ಮುಗುಳ್ನಗೆ ನಗುವುದಷ್ಟೇ ಅದೇ ಯಾವಾಗಲೂ ಅವರದು ಮಾತು ಕಮ್ಮಿಯೇ , ನಿಧಾನವಾಗಿ ಹೇಳುವರು " ಫೇಸಬುಕ್ ನಲ್ಲಿ ನೋಡಿದೆನವಾ ನೀನು ಮೇಘಾಲಯಕ್ಕೆ ಹೋಗಿ ಬಂದಿದ್ದರು ಅಂತ ಅಂದಾಗ ಅಲ್ಲಿಯೇ ಅವರ ಮಗ್ಗುಲಲ್ಲಿಯೇ ನಿಂತಿದ್ದ ರಾಘವೇಂದ್ರ ಪಾಟೀಲ ಸರ್ " ಹ್ಮೂಂ ಅವಳು ಸಂಚಾರಿ, ಮತ್ತು ಚಾರಣ ಪ್ರಿಯಳು " ಅಂದಾಗ ಎಲ್ಲರೂ ಜೋರಾಗಿ ನಕ್ಕರು ಆಗ ರಂಗಾಯಣದ ಆವರಣವೆಲ್ಲವೂ ಸಂತಸದಿಂದ ಕಿಲಕಿಲ ನಕ್ಕಂತೆ ಭಾಸವಾಯಿತು.
ಇದು ಎಲ್ಲರಿಗೂ ಗೊತ್ತಿರುವ ವಿಷಯ ಏನೆಂದರೆ ನಾನು ಎಲ್ಲಾ ಕ್ಷಣಗಳನ್ನು ಸೆರೆ ಹಿಡಿದಿಟ್ಟುಕೊಳ್ಳುವ ಆಸಕ್ತಿ ಇರುವಳು ಅಂತ ಅದೇ ರೀ ಎಲ್ಲರ ನಗುವಿನ ಫೋಟೋ ಗಳನ್ನು ಕ್ಲಿಕ್ಕಿಸುವುದು !!!
ನೆನಪಿದೆ ಧಾರವಾಡ ರಂಗಾಯಣದ ಸಮುಚ್ಚಯ ಭವನದ ಮುಂದೆ ನಿಂತೂ ಎಲ್ಲರೂ ನಗನಗತಾ ಒಂದೆರಡು ಫೋಟೋ ತೆಗೆಸಿಕೊಂಡಿದ್ದು.
ಹೀಗೆ ಬಹಳಷ್ಟು ಸಾರಿ ಭೇಟಿ ಲಗು ಮಾತು ಎಲ್ಲವೂ ಇದ್ದವು ಅವರ ನಮ್ಮ ನಡುವೆ.
ನಾನು ಗಿರಡ್ಡಿ ಸರ್ ಅವರನ್ನು ಕೊನೆಗೆ ನೋಡಿದ್ದು ನಿರ್ದೇಶಕ, ರಂಗಕರ್ಮಿ ಜಗುಚಂದ್ರ ಕೂಡ್ಲ ಅವರ ನಿಧನರಾದ ದಿನವೇ ಮಾತ್ರ ಅಂದು ಎಲ್ಲರೂ ಧಾರವಾಡದ ನೌಕರಭವನದಲ್ಲಿ ಸೇರಿದ್ದೇವು ಶವ ಸಾರ್ವಜನಿಕ ವಿಕ್ಷಣೆಗೆ ಅಲ್ಲಿಗೆ ತರಲಾಗುತ್ತದೆ ಎಂಬ ಸೂಚನೆ ಇತ್ತು ಬಹಳ ಹೊತ್ತಾದರೂ ಸಹ ಶವ ತರುವುದರ ಸುದ್ದಿನೇ ಇಲ್ಲವಾಗಿತ್ತು .ಗಳಿಗೆ ಗಳಿಗೆ ಗೇಟಕಡೆಗೆ ದೃಷ್ಟಿ ಯಾರೋ ಬರತಾ ಇದೆ ಅಂದ್ರು ಎಲ್ಲರೂ ಗೇಟ ಬಳಿ ಹೋಗಿ ನಿಂತೆವು ಗಿರಡ್ಡಿ ಸರ್ ಒಂದು ಕ್ಯಾರಿ ಬ್ಯಾಗನಲ್ಲಿ ಮಾಲೆ ಹಿಡಿದು ನನ್ನ ಪಕ್ಕದಲ್ಲಿಯೇ ನಿಂತಿದ್ದರು. ಸ್ವಲ್ಪ ಹೊತ್ತಾಯಿತು ಸುಮ್ಮನೆ ನಿಂತಿದ್ದ ಗಿರಡ್ಡಿ ಸರ್ ನನ್ನೆಡೆಗೆ ನೋಡಿ " ಇನ್ನೂ ತಡವಾಗತೈತಿ ಅಂತ ಅನಿಸತೈತಿ " ಅಂದ್ರು " ಹೌದೇನೋ ಸರ್ ತಡವಾಯಿತು" ಅಂದೆ " ನಾನು ಹೋಗ್ತೇನವಾ ನನಗೆ ನಿಲ್ಲಾಕ ಆಗ್ತಿಲ್ಲಾ , ಶುಗರ್ ಇದೆಯಲ್ಲ ಬಹಳ ಹೊತ್ತು ಏನೂ ತಿನ್ನದೇ ಇರಾಕ ಆಗುವುದಿಲ್ಲ " ಅಂತ ಹೇಳುತ್ತ ಹೋಗಲು ಅಣಿಯಾದರು ಮತ್ತು ನನ್ನ ಪಕ್ಕದಲ್ಲಿರುವ ಯಾರದೋ ಹತ್ರ ತಮ್ಮ ಕೈಯಲ್ಲಿಯ ಮಾಲೆ ಇರುವ ಕ್ಯಾರಿಬ್ಯಾಗ ಕೊಟ್ಟು " ನೀ ಹಾಕಿ ಬಿಡಪಾ ಇದನ್ನು ಮಾಲಿ " ಅಂದು ನನಗ " ಬರತೆನವಾ " ಅಂದು ಹೋಗಿಬಿಟ್ಟರು.
ಅದೇ ಕೊನೆದಿನ ಅವರನ್ನು ನಾನು ನೋಡಿದ್ದು .ನಾನಂತೂ ಎಲ್ಲಾ ಸಾಹಿತ್ಯ ಸಂಭ್ರಮಗಳಲ್ಲಿ ಅವರ ನಗುಮುಖವನ್ನು ಮಾತ್ರ ಕಂಡವಳು.
ಗಿರಡ್ಡಿ ಸರ್ ಅಂದಕೂಡಲೇ ಮೊದಲು ಕಣ್ಣಿಗೆ ಬರುವುದೇ ಅವರ ಶಾಂತ ಮತ್ತು ನಗೆಮೊಗ. ಆ ನಗೆಮೊಗದ ಹಿಂದೆಲ್ಲ ಅವರ ಸ್ನೇಹಶಿಲ ವ್ಯಕ್ತಿತ್ವದ ನಿಲುವಿದೆ. ಎಷ್ಟೋ ಪ್ರತಿಭೆಯನ್ನು ಒಡಲೊಳಗೆ ಇಟ್ಟುಕೊಂಡು ಬಹಿರಂಗ ಪ್ರದರ್ಶನಕ್ಕೆ ಇಡದಿರುವ ಅವರ ಸರಳ ವ್ಯಕ್ತಿತ್ವದ ವರ್ತನೆ ಎಲ್ಲರನ್ನೂ ತನ್ನೆಡೆಗೆ ಸೆಳೆಯದೇ ಇರದಿರಲಿಲ್ಲ .
ನನಗೆ ಗೊತ್ತಿರುವ ಗಿರಡ್ಡಿಯವರು ಮಾತ್ರ ಒಳ್ಳೆಯ ವಿಮರ್ಶಕರು ಅಂತ ಮಾತ್ರ ಇರದೇ ಧಾರವಾಡ ಸಾಹಿತ್ಯಕ ನಗರಿಯಲ್ಲಿ ಅಕ್ಷರಗಳ ಜಾತ್ರೆ ನಡೆಸುವ ಸಾಹಿತ್ಯ ಸಂಭ್ರಮದ ರೂವರಿ ಅಂತ ಕೂಡಾ ಆಗಿದೆ. ಅವರು ಸಾಹಿತ್ಯ ಸಂಭ್ರಮದ ಉತ್ಸಾಹದ ಚಿಲುಮೆಯಾಗಿ ಎಲ್ಲರ ಕಣ್ಣಿಗೆ ಗೋಚರಿಸಿದವರು. ನನ್ನಂತಹ ಕಿರಿಯ ಲೇಖಕಿಯ ಆಪ್ತರಾಗಿದ್ದು ಕೂಡಾ ನನಗೆ ಸಂಭ್ರಮದ ಗರಿ.
ಅಂದು 11 ನೆಯ ಮೇ 2018 ರ ಸಂಜೆಗೆ ಹೆಸರಾಂತ ತಬಲಾವಾದಕ ಅನೀಲ ಮೇತ್ರಿಯವರ ಮೆಸ್ಸೆಜು WhatsApp ನಲ್ಲಿ ಬಂತು " ಡಾ. ಗಿರಡ್ಡಿ ಗೋವಿಂದರಾಜ ಇನ್ನಿಲ್ಲ ಈಗಷ್ಟೇ ಸಂಜೆ 7 ಗಂಟೆಗೆ ಹೃದಯಾಘಾತದಿಂದ ಸಾವನಪ್ಪಿದ್ದಾರೆ ಅಂತ . ನಂಬಲಾಗದೇ ಅನೀಲನಿಗೆ ಫೋನಾಯಿಸಿದದೆ ಆ ಕಡೆಯಿಂದ ಫೋನ್ ರಿಸೀವ ಮಾಡಿದ ಅನಿಲ " ಹೌದ್ರಿ ಮೆಡಮ್ಮ ನಿಜ " ಅಂದ್ರು.ಕೂಡಲೇ ನಾನು ಉತ್ತರ ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿರುವ ಡಾ.ವೀಣಾ ಸಂಕಣಗೌಡರ ಅವರಿಗೆ ಪೋನ್ ಮಾಡಿ" ಮ್ಯಾಡಮ್ ಹೀಗೆ ಗಿರಡ್ಡಿ ಸರ್ ಹೋದರಂತೆ ಏನು ಮಾಡೋಣ ? ಮನೆಗೆ ಹೋಗೋಣವೇ ? " ಅಂದೆ. ಅವರು ಈಗ ಬೇಡ ಎಲ್ಲರಿಗೂ ಮೆಸ್ಸೆಜು ಹಾಕು ನಾಳೆ ಬೆಳಿಗ್ಗೆ 7 ಗಂಟೆಗೆ ಹೋಗೋಣ " ಅಂದ್ರು " ಹ್ಮೂಂ " ಫೋನ್ ಕಟ್ ಮಾಡಿ , ಸುಜಾತಾ ಹಡಗಲಿ , ಮೇಘಾ ಹುಕ್ಕೇರಿ, ಎಲ್ಲರಿಗೂ ಕಾಲ್ ಮಾಡಿ ತಿಳಿಸಿದೆ.
ಮಾರನೆಯ ದಿನ ಬೆಳಿಗ್ಗೆ ಹೋಗುವದು ಅಂತ ನಿರ್ಧರಿಸಿದೆವು.
ಮಾರನೆಯ ದಿನ ಗಿರಡ್ಡಿ ಸರ್ ಮನೆಗೆ ಹೋದಾಗ ನಾನು ಕಂಡಿದ್ದು ಮಾತ್ರ ಮತ್ತದೇ ಶಾಂತ ಮೂರ್ತಿಯನ್ನು .
ಅವರ ಹೆಂಡತಿ ಸರೋಜಾ ಅವರು ಪಕ್ಕದಲ್ಲಿ ನಿಂತಿದ್ರು ನಾನು ಮುಂದೆ ಹೋಗಿ ಕೊನೆಗೊಂದು ಸಾರಿ ಎಂಬಂತೆ ನಮಸ್ಕರಿಸಿದೆ " ಸಾಯಂಕಾಲ ಚಹಾ ಕುಡಿತಾ ಕುಂತಿದ್ರು ಚಹಾದ ಕಪ್ ಕೈಯಲ್ಲಿ ಹಾಗೆಯೇ ಇತ್ತು ಕಾಲ ಮೇಲೆ ಕಾಲು ಹಾಕಿ ಕುಳಿತಿದ್ರು ಚಹಾ ಕಪ್ ಕೈಯಲ್ಲಿಯೇ ಹಿಡಿದುಕೊಂಡು ಹೋಗಿದ್ದಾರೆ " ಅಂದ್ರು . ನಾನು ಸುಜಾತಾ , ಮೇಘಾ ಶಬ್ದಗಳೇ ಆಡದೇ ತಟಸ್ಥವಾಗಿ ಮೌನದಲ್ಲಿ ನಿಂತಿದ್ದೇವು . " ಕುಂತಲ್ಲೇ ಹೋಗಿ ಬಿಟ್ರು " ಅಂತ ಹೇಳಿ ಅವರ ಹೆಂಡತಿ ಮೌನವಾದರು . ಸುಖದ ಸಾವಿದು ಇಲ್ಲಿ ಬರುವುದು ಖಚಿತವಾದರೂ ಹೋಗುವುದು ನಿಶ್ಚಿವೆನ್ನುವ ಸಾಲುಗಳು ನಾನು ಯು.ಆರ್. ಅನಂತಮೂರ್ತಿ ನಿಧನರಾದಾಗ ಬರೆದಿದ್ದೆ ಅವೇ ಸಾಲಗಳು ಹಾಯ್ದು ಹೋದವು.
ಎಲ್ಲರೂ ಹೊರಗೆ ಬಂದು ಗಿರಡ್ಡಿ ಸರ್ ಅವರ ಮನೆಯ ಅಂಗಳದಲ್ಲಿ ಕುಳಿತೆವು ಹೊರಗಡೆ ಭಜನೆಗೆ ತಯಾರಿ ನಡೆದಿತ್ತು . ಗದ್ದಲ ಬೇರೆ ಶುರುವಾಗಿತ್ತು ಎಲ್ಲಾ ಹಿರಿಯರು ಕುಂತಿದ್ರು . ಗಿರಡ್ಡಿ ಸರ್ ಹುಟ್ಟೂರಾದ ಅಬ್ಬಿಗೇರಿಯಲ್ಲಿ ಅವರ ಅಂತ್ಯಕ್ರಿಯೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಸುಮಾರು ಆರು ದಶಕಗಳ ಕಾಲ ಕತೆ, ವಿಮರ್ಶೆ ಮತ್ತೆ ಸಂಘಟನೆಯ ರೂವಾರಿ ಹಾಗ - ಹೀಗೆ ಅನ್ನುವುದರ ಮೂಲಕ ಮತ್ತು ಸಾಹಿತ್ಯ ಸಂಭ್ರಮ ಅಂದರೆ ಡಾ. ಗಿರಡ್ಡಿ ಗೋವಿಂದರಾಜ ಅನ್ನುವಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಇದ್ದು ಸಾಹಿತ್ಯ ಲೋಕವನ್ನು ಸಮೃದ್ಧ ಗೊಳಿಸಿದ್ದ ಅವರು ನಮ್ಮನ್ನೆಲ್ಲ ಅಗಲಿ ಮರಳಿ ಬಾರದ ನೆಲದೊಳಗಿನ ಮಣ್ಣಾದರು.
------------***--------------- -
ಕವಯಿತ್ರಿ
ಪ್ರೇಮಾ ನಡುವಿನಮನಿ ಧಾರವಾಡ
ಕಾವ್ಯ ನಾಮ
ಕನಸು ಕಂಗಳ ಚೆಲುವೆ
" ಆಪ್ತತೆಯ ನಗೆಮೊಗದ ಗಿರಡ್ಡಿ ಸರ್ "
Reviewed by ಕನಸು ಕಂಗಳ ಚೆಲುವೆ
on
March 06, 2019
Rating: 5
Reviewed by ಕನಸು ಕಂಗಳ ಚೆಲುವೆ
on
March 06, 2019
Rating: 5

No comments: